ಬೆಂಗಳೂರು, ಮಂಗಳವಾರ, 28 ಸೆಪ್ಟೆಂಬರ್ 2010( 12:46 IST )
ರಾಜ್ಯದಲ್ಲಿ ಕನ್ನಡ ಮಾತನಾಡುವುದು ಕೂಡ ಅಪರಾಧವಂತೆ! ಹಾಗಂತ ನಗರದಲ್ಲಿ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುವ ನೌಕರರಿಗೆ ಕಟ್ಟಪ್ಪಣೆ ನೀಡಲಾಗಿದೆ. ಒಂದು ವೇಳೆ ಅಪ್ಪಿತಪ್ಪಿ ಕನ್ನಡ ಮಾತನಾಡಿದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. ಎಚ್ಚರಿಕೆ ಮೀರಿಯೂ ಕನ್ನಡ ಮಾತನಾಡಿದ್ರೆ ಕೆಲಸದಿಂದ ವಜಾ!
ನಗರದ ಕ್ರೌನ್ ಪ್ಲಾಜಾ ಹೋಟೆಲ್‌ನಲ್ಲಿ ಕೆಲಸ ಮಾಡುವ ಯಾವುದೇ ನೌಕರರು ಕನ್ನಡದಲ್ಲಿ ಮಾತನಾಡುವಂತಿಲ್ಲ!.ಕೆಲಸ ಮಾಡುತ್ತಿದ್ದ ವೇಳೆ ಕನ್ನಡ ಮಾತನಾಡಿದ್ದಕ್ಕೆ ಹೋಟೆಲ್ ಕ್ಯಾಬ್ ಡ್ರೈವರ್ ನಂದೀಶ್ ಎಂಬವರಿಗೆ ಮೂರು ಬಾರಿ ದಂಡ ಹಾಕಲಾಗಿತ್ತು. ಅಲ್ಲದೇ ಇನ್ಮುಂದೆ ಕನ್ನಡ ಮಾತನಾಡಬಾರದು ಎಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೆ ನಂದೀಶ್ ಎಚ್ಚರಿಕೆ ಮೀರಿ ಕನ್ನಡ ಮಾತನಾಡಿದ್ದಕ್ಕೆ ಹೋಟೆಲ್ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ವಜಾ ಮಾಡಿದೆ!
ಹೌದು, ನಮ್ಮ ಹೋಟೆಲ್ ರೂಲ್ಸ್ ಪ್ರಕಾರ ನಮ್ಮ ನೌಕರರು ಕರ್ತವ್ಯ ನಿರ್ವಹಿಸುವ ವೇಳೆ ಕನ್ನಡದಲ್ಲಿ ಮಾತನಾಡಲೇ ಬಾರದು ಎಂದು ಹೋಟೆಲ್ ಆಡಳಿತ ಮಂಡಳಿಯ ಮ್ಯಾನೇಜರ್ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ!
ಕ್ರೌನ್ ಹೋಟೆಲ್ ನೌಕರರು ಕೆಲಸದ ವೇಳೆ ಒಂದು ಕನ್ನಡ ಮಾತನಾಡಿದರೂ ಹತ್ತು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಒಟ್ಟಾರೆ ಹುಟ್ಟಿದ ಊರಿನಲ್ಲಿ ಕನ್ನಡ ಮಾತನಾಡುವುದು ಕೂಡ ಕಷ್ಟವಾದ್ರೆ ಹೇಗೆ ಎಂದು ಕ್ರೌನ್ ಪ್ಲಾಜಾ ಹೋಟೆಲ್ ನೌಕರಿಯಿಂದ ವಜಾಗೊಂಡ ನಂದೀಶ್ ಪ್ರಶ್ನಿಸಿದ್ದಾರೆ.
ನಮ್ಮ ರಾಜ್ಯದಲ್ಲಿಯೇ ಹೋಟೆಲ್ ಕಟ್ಟಿ, ಕನ್ನಡ ಭಾಷೆಯಲ್ಲಿ ಮಾತನಾಡಬೇಡಿ ಎಂದರೆ ಹೇಗೆ?ಇದ್ಯಾವ ಸೀಮೆಯ ಹೋಟೆಲ್ ಎಂದು ಆಕ್ರೋಶ ವ್ಯಕ್ತಪಡಿಸಿರುವ ನಂದೀಶ್, ಈ ಬಗ್ಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.