ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಕ್ಕೆ ಪದವಿ ಕಡ್ಡಾಯ: ಕಾಗೇರಿ
ಕೊಪ್ಪಳ, ಮಂಗಳವಾರ, 28 ಸೆಪ್ಟೆಂಬರ್ 2010( 14:52 IST )
ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಕ್ಕೆ ಪದವಿ ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಶೀಘ್ರದಲ್ಲಿಯೇ ಅಂತಿಮ ನಿರ್ಣಯ ಹೊರಬೀಳಲಿದೆ. ಪಿಯು ಹಾಗೂ ಡಿ.ಎಡ್ ಆಧಾರದ ಮೇಲೆ ಶಿಕ್ಷಕರ ನೇಮಕದಿಂದ ಗುಣಮಟ್ಟ ಶಿಕ್ಷಣ ನೀಡಲು ಸಾಧ್ಯವಿಲ್ಲ. ಪದವಿ ಪಡೆದ ಶಿಕ್ಷಕರಿದ್ದರೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.
ಶೈಕ್ಷಣಿಕವಾಗಿ ಹಿಂದುಳಿದ ಕೊಪ್ಪಳ ಸೇರಿದಂತೆ ಸುಮಾರು 12 ಜಿಲ್ಲೆಗಳಿಗೆ ರಾಜ್ಯಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸೇರಿದಂತೆ ಇತರ ಚಟುವಟಿಕೆಗಳಿಗೆ ಪ್ರೌತ್ಸಾಹ ಹಾಗೂ ಶಿಕ್ಷಣದ ಅಭಿವೃದ್ದಿಗೆ ಅಧಿಕಾರಿಗಳು ಗಮನಹರಿಸುತ್ತಾರೆ. ಶಾಲೆಗಳಿಗೆ ಡಯಟ್ ಅಧಿಕಾರಿಗಳು ಸೇರಿದಂತೆ ಸಿಆರ್ಪಿ, ಬಿಆರ್ಪಿ ಭೇಟಿ ನೀಡುವಂತೆ ಸೂಚಿಸಿದೆ ಎಂದರು.