ಶಿಕ್ಷಕರಾಗುವವರು ಮಾತೃಭಾಷೆಯಲ್ಲಿ ಆಳವಾದ ಜ್ಞಾನ ಪಡೆಯದಿದ್ದರೆ ಪರಿಪೂರ್ಣ ಶಿಕ್ಷಕನಾಗಲು ಸಾಧ್ಯವಿಲ್ಲ. ಮಾತೃಭಾಷೆ ಜತೆಗೆ ಆಂಗ್ಲ ಹಾಗೂ ಹಿಂದಿ ಭಾಷೆಯ ಜ್ಞಾನವನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳ ಜ್ಞಾನ ಸಂಪಾದನೆ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೈಸೂರು ಇಂಪ್ಯಾಕ್ಟ್ ಸಂಸ್ಥೆಯ ಡಾ. ಎಚ್.ಎನ್.ವಿಶ್ವನಾಥ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ರಾಮಕೃಷ್ಣ ಮಠದಲ್ಲಿ 'ಯುವ ಸಮ್ಮೇಳನ'ದ ಪ್ರಯುಕ್ತ ಬಿಎಡ್ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಜೀವಿಗಳಾದ ನಾವು ಹೇಳಿಕೆಗೆ, ತೋರಿಕೆಗೆ ಸರ್ವಶ್ರೇಷ್ಠರಾಗಿದ್ದೇವೆ. ಆದರೆ ಸರ್ವಶ್ರೇಷ್ಠ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಹಿಂದಿನ ದಿನಗಳ ಚಿಂತೆ ಜತೆಗೆ ಮುಂದಿನ ದಿನಗಳ ಬಗ್ಗೆ ಅನಿಶ್ಚಿತತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಯುವ ಜನಾಂಗ ಇಂದಿನ ದಿನವನ್ನು ಮರೆಯುತ್ತಿದೆ. ಈ ದೃಷ್ಟಿಕೋನ ಬದಲಾಗಬೇಕು ಎಂದು ಅವರು ಹೇಳಿದರು.
ಬದುಕಿದ್ದಾಗಲೂ ಕೂಡ ಇನ್ನೊಬ್ಬರಿಗಾಗಿ ಬದುಕಿದ್ದೇನೆ. ಸತ್ತ ಬಳಿಕವೂ ತನ್ನ ಜೀವನದ ಮೌಲ್ಯಗಳನ್ನು, ತತ್ವಗಳನ್ನು ಇನ್ನೊಬ್ಬರಿಗೆ ಬಿಟ್ಟುಹೋಗಿದ್ದೇನೆ ಎನ್ನುವ ಮಹಾಪುರುಷರು ಕೆಲವೇ ಕೆಲವು ಮಂದಿ. ಅಂತಹವರಲ್ಲಿ ಸ್ವಾಮಿ ವಿವೇಕಾನಂದರು ಮೊದಲ ಸಾಲಿನಲ್ಲಿ ಕಂಡುಬರುತ್ತಾರೆ ಎಂದು ಡಾ. ವಿಶ್ವನಾಥ್ ಹೇಳಿದರು.