ಭೂ ಹಗರಣ-ದೇವರು ಮತ್ತೆ ಅಗ್ನಿಪರೀಕ್ಷೆ ಒಡ್ಡಿದ್ದಾನೆ: ಸಿಎಂ
ಬೆಂಗಳೂರು, ಮಂಗಳವಾರ, 28 ಸೆಪ್ಟೆಂಬರ್ 2010( 17:15 IST )
ದೇವರು ಮತ್ತೆ ಅಗ್ನಿಪರೀಕ್ಷೆಗೆ ಒಡ್ಡಿದ್ದಾನೆ. ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬ ಸದಸ್ಯರ ವಿರುದ್ದ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಇದು ತಮಗೆ ಅಗ್ನಿಪರೀಕ್ಷೆ ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ತಮ್ಮ ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದಿರುವ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸರಿಯಲ್ಲ. ಇದಕ್ಕೆಲ್ಲಾ ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದರು.
ರೇಸ್ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಐಎಡಿಬಿ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿದೆ. ಈ ಬಗ್ಗೆ ಮಾತನಾಡುವುದು ಸರಿಯಲ್ಲ, ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದರು. ಕೆಐಎಡಿಬಿ ಹಗರಣದಲ್ಲಿ ತಮ್ಮ ಸಚಿವ ಸಂಪುಟದ ಸದಸ್ಯರು ಭಾಗಿಯಾಗಿಲ್ಲ ಎನ್ನುವ ನಂಬಿಕೆಯಿದೆ. ಲೋಕಾಯುಕ್ತರ ವರದಿ ಬರುವವರೆಗೂ ಕಾಯೋಣ, ಸತ್ಯ ಬಹಿರಂಗವಾಗುತ್ತದೆ ಎಂದರು.
ಲೋಕಾಯುಕ್ತರ ಬಗ್ಗೆ ತಮಗೆ ಅಪಾರ ಗೌರವವಿದೆ. ತನಿಖೆಗೆ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಹಾಗಾಗಿ ತನಿಖೆಯಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲ ಹಾಗೂ ಯಾವುದೇ ಹಸ್ತಕ್ಷೇಪ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.