ಕೆಐಎಡಿಬಿ ಭೂ ಹಗರಣ ಕುರಿತಂತೆ ನನ್ನ ಮೇಲೆ ಯಾವುದೇ ರಾಜಕೀಯ ವ್ಯಕ್ತಿಗಳು ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ತಿಳಿಸಿದ್ದಾರೆ.
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆಂಬ ವದಂತಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆದಿದೆ. ಮುಂದಿನ 15 ದಿನದಲ್ಲಿ ಪ್ರಕರಣದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಪ್ರಕರಣದ ಬಗ್ಗೆ ಯಾವುದೇ ಪ್ರಭಾವ ಹಾಗೂ ಒತ್ತಡಕ್ಕೆ ನಾನು ಮಣಿಯುವುದಿಲ್ಲ. ಕಟ್ಟಾ ಅವರು ನನ್ನನ್ನು ಭೇಟಿ ಮಾಡಿಯೂ ಇಲ್ಲ. ಅಷ್ಟೇ ಅಲ್ಲ ನನ್ನ ಮೇಲೆ ಪ್ರಭಾವ ಬೀರಲೂ ಸಾಧ್ಯವಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಯಲಿದೆ ಎಂದರು.
ಕೆಐಎಡಿಬಿ ಭೂ ಹಗರಣದಲ್ಲಿ ಪ್ರಭಾವಿ ಸಚಿವರು ಹಾಗೂ ಪುತ್ರನ ಕೈವಾಡವಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಸಂಬಂಧ ಸಚಿವರು ಲೋಕಾಯುಕ್ತರನ್ನು ಭೇಟಿ ಮಾಡಿ ಸಮಜಾಯಿಷಿ ನೀಡಿದ್ದಾರೆಂದು ಕೂಡ ವರದಿಯಾಗಿದ್ದನ್ನು ಸ್ಮರಿಸಬಹುದು.