ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಸಂಬಂಧ ಹೆಬ್ಬಾಳ ಕೆರೆಯ ಬಳಿ ನಿರ್ಮಾಣ ಆಗುತ್ತಿರುವ 'ಹೈಸ್ಪೀಡ್' ರೈಲು ಕಾಮಗಾರಿ ಪೂರ್ಣಗೊಂಡರೆ ದಿನವೊಂದಕ್ಕೆ ಸುಮಾರು ಎರಡು ಲಕ್ಷ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಮೂಲ ಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಧು ಹೈಕೋರ್ಟ್‌ಗೆ ಮಂಗಳವಾರ ವಿವರ ನೀಡಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಮರ್ಪಣಾ ಸಂಸ್ಥೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆ ಕುರಿತಂತೆ ಮಧು ಅವರು ಪ್ರಮಾಣಪತ್ರ ಸಲ್ಲಿಸಿದ್ದು, 19 ಗಂಟೆಗಳಲ್ಲಿ ಎರಡು ಲಕ್ಷ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ರೈಲಿಗೆ ಇದೆ ಎಂದು ತಿಳಿಸಿದ್ದಾರೆ.
ಈ ಕಾಮಗಾರಿಯಿಂದ ಹೆಬ್ಬಾಳ ಕೆರೆಗೆ ಧಕ್ಕೆ ಆಗಲಿದೆ ಎನ್ನುವುದು ಅರ್ಜಿದಾರರ ಆರೋಪವಾಗಿತ್ತು. ಈ ಆರೋಪದ ಕುರಿತು ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಈ ಹಿಂದೆ ಮಧು ಅವರಿಗೆ ನಿರ್ದೇಶಿಸಿತ್ತು. ಆದರೆ ಈ ಆದೇಶ ಪಾಲನೆ ಮಾಡಿಲ್ಲ ಎಂದು ಅವರ ವಿರುದ್ಧ ಸಂಸ್ಥೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿತ್ತು.
ಆ ನಿಟ್ಟಿನಲ್ಲಿ ಕಾಮಗಾರಿಯ ಮಹತ್ವವನ್ನು ಮಧು ಅವರು ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ. ಪ್ರಮಾಣಪತ್ರದ ವಿವರವನ್ನು ಪರಿಶೀಲಿಸಿದ ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ವಜಾಗೊಳಿಸಿತು.