ಅಯೋಧ್ಯೆಯ ರಾಮಜನ್ಮಭೂಮಿ ಭೂ ವಿವಾದದ ಕುರಿತು ಅಲಹಾಬಾದ್ ಹೈಕೋರ್ಟ್ ಗುರುವಾರ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಬುಧವಾರ ಸಂಜೆಯಿಂದಲೇ ಜಾರಿಗೆ ಬರುವಂತೆ ಮೂರು ದಿನಗಳ ಕಾಲ ನಿಷೇಧಾಜ್ಞೆ, ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ತೀರ್ಪು ಪ್ರಕಟವಾಗುವ ನಿಟ್ಟಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಎಸ್‌ಪಿ, ನಗರಪ್ರದೇಶದಲ್ಲಿ ಪೊಲೀಸ್ ಆಯುಕ್ತರು ನಿಗಾವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಅಜಯಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಸಂಜೆಯಿಂದಲೇ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳ್ಳಲಿದ್ದು, ಬಂದೋಬಸ್ತ್‌ಗಾಗಿ 50 ಸಾವಿರ ಸಿವಿಲ್ ಪೊಲೀಸರು, 12 ಸಾವಿರ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಅಯೋಧ್ಯೆ ತೀರ್ಪು ಹೊರಬಂದ ನಂತರ ಶಾಂತಿ ಕಾಪಾಡುವ ಸಲುವಾಗಿ ಈಗಾಗಲೇ ಪ್ರತಿ ನಗರ, ಪಟ್ಟಣಗಳಲ್ಲಿ ಶಾಂತಿ ಸಮಿತಿ, ಮೊಹಲ್ಲಾ ಸಮಿತಿ, ನಾಗರಿಕ ಸಮಿತಿ ರಚಿಸಲಾಗಿದ್ದು, ಎಲ್ಲ ರಾಜಕೀಯ ಮುಖಂಡರ ಸಭೆ ನಡೆಸಿ ಶಾಂತಿ ಸೌಹಾರ್ದ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದರು.