ಸಂಗೀತ ಕ್ಷೇತ್ರದಲ್ಲಿ ಯುವ ಪೀಳಿಗೆ ತೊಡಗಿಕೊಳ್ಳಲಿ: ಕಾಗೇರಿ
ಸಿದ್ದಾಪುರ, ಗುರುವಾರ, 30 ಸೆಪ್ಟೆಂಬರ್ 2010( 14:59 IST )
ಭಾರತೀಯ ಪರಂಪರೆಯ ಹೆಮ್ಮೆಯ ಸಂಗೀತ ಕ್ಷೇತ್ರದಲ್ಲಿ ಯುವಪೀಳಿಗೆಯನ್ನು ತೊಡಗಿಸಬೇಕಾದ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬೆಂಗಳೂರಿನ ಗಾನಕಲಾ ಪರಿಷತ್ ಹಾಗೂ ಸಿದ್ದಾಪುರ ಶೃಂಗೇರಿ ಶಂಕರಮಠದ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಐದು ದಿನಗಳ ಸಂಗೀತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಅನೇಕ ಉತ್ತಮ ಕ್ಷೇತ್ರಗಳನ್ನು ಇಂದಿನ ಯುವ ಪೀಳಿಗೆ ಕಡೆಗಣಿಸುತ್ತಿದೆ. ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದೆ. ಜೀವನದ ಧನ್ಯತೆ ಕಾಣುವ ಕಲೆಯ ಬಗ್ಗೆ ಯುವ ಪೀಳಿಗೆ ಗಮನ ನೀಡಬೇಕು ಎಂದರು.
ಸಂಗೀತಕ್ಕೆ ಇರುವ ಅಗಾಧ ಶಕ್ತಿ ವರ್ಣನೆಗೆ ನಿಲುಕದ್ದು. ಇದು ಸನಾತನವಾಗಿ ಉಳಿದು ಬೆಳೆದು ಬಂದ ಕಲೆ. ಹಿಂದೆ ಇಂಥ ಕಲೆಗಳಿಗೆ ರಾಜಾಶ್ರಯವಿತ್ತು. ಇತ್ತೀಚಿನ ದಿನಗಳಲ್ಲಿ ಅದರ ಕೊರತೆಯ ಮಾತು ಕೇಳಿಬರುತ್ತಿದೆ. ರಾಜ್ಯದ ಬಿಜೆಪಿ ಸರಕಾರ ಕಲೆಗಳ ಕುರಿತು ಆಸಕ್ತಿ, ಅಭಿಮಾನ ಹೊಂದಿದ್ದು, ಮೈಸೂರಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಅಲ್ಲದೇ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಸಾಧಕರ ಸ್ಮರಣೆಗೆ ಯೋಜನೆ ರೂಪಿಸಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಜತೆಗೆ ಸಂಗೀತ ಶಿಕ್ಷಕರ ನಿಯೋಜನೆಗೆ ಬೇಡಿಕೆ ಕೇಳಿಬರುತ್ತಿದೆ. ಈ ಕುರಿತು ಆದ್ಯತೆ ನೀಡಲಾಗುವುದು ಎಂದರು.