ನನ್ನ ಮಗನ ವಿರುದ್ಧ ಸಂಚು ರೂಪಿಸಲಾಗಿದೆ: ಕಟ್ಟಾ ಸುಬ್ರಮಣ್ಯ
ಬೆಂಗಳೂರು, ಶುಕ್ರವಾರ, 1 ಅಕ್ಟೋಬರ್ 2010( 10:59 IST )
NRB
'ವ್ಯವಸ್ಥಿತ ಸಂಚು ರೂಪಿಸಿ ನನ್ನ ಮಗನನ್ನು ಬಲೆಗೆ ಕೆಡವಲಾಗಿದೆ' ಎಂದು ವಸತಿ ಖಾತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು, ಪುತ್ರ ಕಟ್ಟಾ ಜಗದೀಶ್ ಲೋಕಾಯುಕ್ತ ಪೊಲೀಸರಿಗೆ ಸೆರೆ ಸಿಕ್ಕ ನಂತರ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗಿನ ಕೆಲವು ದಿನಗಳಿಂದ ನನ್ನ ಏಳಿಗೆ ಸಹಿಸದ ಕೆಲವು ವ್ಯಕ್ತಿಗಳು ಪಿತೂರಿ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ನನ್ನ ಮಗನ ವಿರುದ್ಧವೂ ಷಡ್ಯಂತ್ರ ನಡೆಸಿ ಲೋಕಾಯುಕ್ತ ಬಲೆಗೆ ಬೀಳುವಂತೆ ಮಾಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಹೋರಾಟದಿಂದ ಬಂದಂತಹ ವ್ಯಕ್ತಿ. ನನಗೇನೂ ಭಯವಿಲ್ಲ. ಲೋಕಾಯುಕ್ತರ ಮೇಲೆ ನಂಬಿಕೆ ಇದೆ. ಲೋಕಾಯುಕ್ತರ ವರದಿ ಬಂದ ನಂತರ ಸತ್ಯ ಬಹಿರಂಗಗೊಳ್ಳುತ್ತದೆ ಎಂದರು. ಆದರೆ ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರು ಯಾರೂ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ಜಾರಿಕೊಂಡರು.
ಯಾವುದೇ ಆರೋಪಕ್ಕೂ ಜಗ್ಗುವ ಪ್ರಶ್ನೆಯೇ ಇಲ್ಲ, ಲೋಕಾಯುಕ್ತರ ಮೇಲೆ ನಂಬಿಕೆ ಇದೆ. ನ್ಯಾಯಾಲಯಗಳಿವೆ. ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಇರುವುದಾಗಿ ನಾಯ್ಡು ಈ ಸಂದರ್ಭದಲ್ಲಿ ಹೇಳಿದರು.
ಗುರುವಾರ ಸಂಜೆ ಗಾಂಧಿನಗರದ ಕಚೇರಿಯಲ್ಲಿ ಸಾಕ್ಷಿದಾರ ರಾಮಾಂಜಿನಪ್ಪ ಎಂಬವರಿಗೆ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ನಾಯ್ಡು ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿತ್ತು.