ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರ ತನಿಖಾ ವಿಭಾಗ(ಸಿಐಡಿ)ದ ಪೊಲೀಸರು ಗುರುವಾರ ರಾಜ್ಯದ ವಿವಿಧೆಡೆ ಗಣಿ ಕಂಪನಿಗಳು ಮಾಲೀಕರ ಕಚೇರಿ, ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರ, ಯಲ್ಲಾಪುರ, ಕಲ್ಕೆರೆ, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಬೆಂಗಳೂರು ಸೇರಿದ ರಾಜ್ಯದ ವಿವಿಧ 24 ಕಡೆಗಳಲ್ಲಿ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಬೇಲಿಕೇರಿ ಅಕ್ರಮ ಅದಿರು ನಾಪತ್ತೆ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ಬೇಲಿಕೇರಿ ಬಂದರಿನಿಂದ ನಾಪತ್ತೆಯಾದ ಸಾವಿರಾರು ರೂ.ಗಳ ಅದಿರು ಎಲ್ಲಿಗೆ ಹೋಗಿದೆ. ಅವರ ದಾಖಲೆ ಪತ್ರಗಳು ಎಲ್ಲಿವೆ, ಅದಕ್ಕೆ ಕಾರಣಕರ್ತರು ಯಾರು ಎಂಬುದನ್ನು ಬಯಲಿಗೆಳೆಯಲು ಈ ದಾಳಿ ನಡೆಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಸಿಐಡಿ ಮಹಾನಿರ್ದೇಶಕ ಗುರುಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿಯ ವೇಳೆ ಅಕ್ರಮ ಅದಿರು ಸಾಗಣೆ, ಅದಿರು ನಾಪತ್ತೆ ಪ್ರಕರಣದ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.