ಜಿಲ್ಲೆಯಲ್ಲಿನ ವಿವಿಧ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಜನರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮನವಿ ಮಾಡಿಕೊಂಡಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಾದ್ಯಂತ ಪ್ರತಿ ವರ್ಷ ಸೆ.28ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸುತ್ತಿದ್ದು ನಾನಾ ಸಂದೇಶಗಳನ್ನು ಪ್ರಕಟಿಸಲಾಗುತ್ತಿದೆ. ಅದರಂತೆ ಕಳೆದ ವರ್ಷ ಮಹಿಳೆಯರಿಗೆ ಪ್ರವಾಸೋದ್ಯಮ ಬಾಗಿಲು ತೆರೆದಿದೆ ಎಂಬ ಸಂದೇಶ ಪ್ರಕಟಿಸಿದ್ದರೆ, ಈ ವರ್ಷ ಪ್ರವಾಸೋದ್ಯಮ ಮತ್ತು ಜೈವಿಕ ವೈವಿಧ್ಯತೆಯ ಸಂದೇಶ ಘೋಷಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ ಅಭಿವೃದ್ದಿಗೆ ವಿಪುಲ ಅವಕಾಶಗಳಿವೆ. ಜಿಲ್ಲೆಯಲ್ಲಿನ ನಾನಾ ಪ್ರವಾಸಿ ತಾಣಗಳ ಮಾಹಿತಿ ಬಗ್ಗೆ ಒಂದು ಕಿರುಹೊತ್ತಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸರಕಾರ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 2 ಕೋಟಿ, ಎಡೆಯೂರು ಕ್ಷೇತ್ರದ ಅಭಿವೃದ್ಧಿಗೆ ರೂ. 20 ಕೋಟಿ, ಚನ್ನಬಸವೇಶ್ವರ ದೇವಾಲಯ ಅಭಿವೃದ್ಧಿಗೆ 1 ಕೋಟಿ, ತಿಪಟೂರಿನ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ 62 ಲಕ್ಷ ಹಾಗೂ ಮಧುಗಿರಿ ಏಕಶಿಲಾಬೆಟ್ಟ ಹಾಗೂ ಶಿರಾ ಪಟ್ಟಣದ ಕೋಟೆ ಮತ್ತು ದೇವರಾಯನದುರ್ಗ ಹಾಗೂ ಸಿದ್ಧರಬೆಟ್ಟ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ ಎಂದರು.