ಮುಂಬರುವ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ರಾಜ್ಯ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಿಂದ ಕೃಷಿ ಕ್ಷೇತ್ರಕ್ಕೆ ಸುಮಾರು 25 ಸಾವಿರ ಕೋಟಿ ರೂ. ಬಂಡವಾಳ ಹರಿದುಬರುವ ನಿರೀಕ್ಷೆ ಇದೆ ಎಂದರು.
ಕೃಷಿ ಉದ್ಯಮಗಳ ಸ್ಥಾಪನೆಗೆ 3ರಿಂದ 4 ಸಾವಿರ ಎಕರೆ ಜಮೀನು ಬೇಕಾಗುತ್ತದೆ. ಇದಕ್ಕಾಗಿ ಕೃಷಿ ಇಲಾಖೆ ಮತ್ತು ಸರಕಾರಿ ಜಮೀನು ಇದೆ. ಕಡಿಮೆಯಾದರೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಕೃಷಿ ಆಧಾರಿತ ಉದ್ಯಮಕ್ಕೆ ಹೆಚ್ಚೆಂದರೆ 100 ಎಕರೆ ಜಮೀನು ಬೇಕು. ಇವೆಲ್ಲವೂ ಗ್ರಾಮಾಂತರದಲ್ಲೇ ಸ್ಥಾಪನೆಯಾಗಲಿರುವುದರಿಂದ ಗ್ರಾಮೀಣರ ಆರ್ಥಿಕ ಮತ್ತು ಉದ್ಯೋಗ ಸ್ಥಿತಿ ಸುಧಾರಣೆ ಜತೆಗೆ ಕೃಷಿ ಉತ್ಪನ್ನಗಳಿಗೂ ಉತ್ತಮ ಬೆಲೆ ದೊರೆಯುತ್ತದೆ ಎಂದು ತಿಳಿಸಿದರು.
ಬಂಡವಾಳ ಹೂಡಿಕೆ ಎಂದರೆ ಗುತ್ತಿಗೆ ಕೃಷಿಯಲ್ಲ. ಕೃಷಿ ಸಂಬಂಧಿ ಇತರೆ ಉದ್ಯಮ ಚಟುವಟಿಕೆಯಾಗಿದೆ. ಗುತ್ತಿಗೆ ಕೃಷಿಗೆ ಎಲ್ಲ ಕಡೆಗೆ ರೈತರ ವಿರೋಧ ಇದೆ. ರಾಜ್ಯದಲ್ಲಿ ಕೃಷಿ ಮತ್ತು ಕೃಷಿಯೇತರ ಜಮೀನಿಗೆ ಕೊರತೆ ಇಲ್ಲ. ಉದ್ಯಮ ಚಟುವಟಿಕೆಗೆ ಕೆಲವಷ್ಟು ಜಮೀನು ಬಳಕೆ ಮಾಡಿದರೂ ಅದು ಕೃಷಿ ಮೇಲೆ ಹೊಡೆತ ಬೀಳುವುದಿಲ್ಲ ಎಂದರು.
ರೈತರಿಗೆ ಸರಕಾರ ಅಗತ್ಯ ಅನುಕೂಲ ಕಲ್ಪಿಸಿಕೊಡಲಿದೆ. ರಾಜ್ಯದ ನಾನಾ ಕಡೆಗಳಲ್ಲಿ ನಾಲ್ಕು ತೋಟಗಾರಿಕೆ ಪಾರ್ಕ್‌ಗಳು ನಿರ್ಮಾಣವಾಗಲಿವೆ. ಮುಕ್ತ ಮಾರುಕಟ್ಟೆ ವ್ಯವಸ್ಥೆ ಮೂಲಕ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.