ಧರ್ಮ ಮತ್ತು ಸಂಸ್ಕೃತಿ ಮತ್ತಷ್ಟು ಸದೃಢವಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದ ಸ್ವಾಮೀಜಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಸಮಾಜದಲ್ಲಿ ಜಾತಿ ಸಾಮರಸ್ಯ ಬೆಳೆಯಬೇಕು. ಸಂಸ್ಕೃತಿ ಮತ್ತಷ್ಟು ಬಲಗೊಳ್ಳಲು ಧಾರ್ಮಿಕ ದಿನಚರಿಯನ್ನು ಜಾತಿ ರಹಿತವಾಗಿ ಪ್ರತಿ ದೇವಾಲಯದಲ್ಲಿ ಮಾಡಿ, ಧರ್ಮ ಮತ್ತು ಸಂಸ್ಕೃತಿಯನ್ನು ಸಶಕ್ತಗೊಳಿಸಬೇಕು ಎಂದರು.
ದೇವಾಲಯ, ಮಠಗಳಲ್ಲಿ ಪೂರ್ಣವಾಗಿ ಮಡಿವಂತಿಕೆ ದೂರ ಮಾಡಲು ಸಾಧ್ಯವಿಲ್ಲ. ಆದರೂ ಸಾಧ್ಯವಿದ್ದಷ್ಟು ಸಡಿಲಿಸಿದ್ದೇವೆ. ಹಳ್ಳಿಗಳಲ್ಲಿ, ದಲಿತ ಕಾಲೋನಿಯಲ್ಲಿ ಪಾದಯಾತ್ರೆ ನಡೆಸಿ ಮಡಿವಂತಿಕೆ ದೂರ ಮಾಡಲು ಯತ್ನಿಸಿದ್ದೇನೆ ಎಂದು ಹೇಳಿದರು.
ದಲಿತರ ಮನೆಗೆ ಹೋದರೂ ಆಕ್ಷೇಪಿಸುವ, ಹೋಗದಿದ್ದರೂ ದೂರುವ ಮತ್ತು ಪಾದಯಾತ್ರೆ ಬಗ್ಗೆ ಟೀಕಿಸುವ ಕೆಲವರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ. ದಲಿತರು ಅಭಿಮಾನದಿಂದ ಸ್ವಾಗತಿಸುತ್ತಿದ್ದಾರೆ ಎಂದರು.
ಪ್ರತಿ ಜಾತಿಗೂ ಸಂಸ್ಕೃತಿ ಇದೆ. ನಮ್ಮದು ಜಾತಿ ನಿರ್ಮೂಲನೆ ಉದ್ದೇಶವಲ್ಲ. ಸಾಮರಸ್ಯ ಹಾಗೂ ಆತ್ಮಗೌರವದಿಂದ ಪ್ರತಿಯೊಬ್ಬರೂ ಬದುಕಬೇಕು ಎಂಬುದಾಗಿದೆ ಎಂದು ಹೇಳಿದರು.