'ಮಕ್ಕಳು ಮಾಡುವ ತಪ್ಪಿಗೆ ಪೋಷಕರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಗುರುವಾರ ಬಿಬಿಎಂಪಿ ಸದಸ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್ ಸಾಕ್ಷಿ ರಾಮಾಂಜಿನಪ್ಪ ಎಂಬವರಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು. ಆ ನಿಟ್ಟಿನಲ್ಲಿ ಸುಬ್ರಮಣ್ಯ ನಾಯ್ಡು ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಶುಕ್ರವಾರ ಪ್ರಶ್ನಿಸಿದಾಗ ಸಿಎಂ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಕ್ಕಳು ಮಾಡಿದ ತಪ್ಪಿಗೆ ತಂದೆ ರಾಜೀನಾಮೆ ನೀಡಬೇಕೆನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಮಂತ್ರಿಗಳ ಮಕ್ಕಳೆ ಇರಲಿ, ಶಾಸಕರ ಮಕ್ಕಳೇ ಇರಲಿ ಅವರು ತಪ್ಪು ಮಾಡಿದಾಗ ಅದಕ್ಕೆ ನಾವು ಹೊಣೆಗಾರರಲ್ಲ. ಮಕ್ಕಳು ತಂದೆ-ತಾಯಿಗಳಿಗೆ ಗೌರವ ತರುವಂತಹ ಕೆಲಸ ಮಾಡಬೇಕು. ಅವರು ತಪ್ಪು ಮಾಡಿದ್ರೆ ತಿದ್ದಿ ಹೇಳಬಹುದು. ಅದನ್ನು ಬಿಟ್ಟು ಅವರು ಮಾಡಿದ ತಪ್ಪಿಗೆ ತಂದೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವುದು ಸರಿಯಲ್ಲ ಎಂದರು.
ಈಗಾಗಲೇ ಕೆಐಎಡಿಬಿ ಪ್ರಕರಣದ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಕಟ್ಟಾ ಜಗದೀಶ್ ಲಂಚ ಸ್ವೀಕರಿಸಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.