ಸಾಕ್ಷಿದಾರ ರಾಮಾಂಜಿನಪ್ಪಗೆ ಸಾಕ್ಷಿ ಹೇಳದಂತೆ ಲಂಚ ನೀಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸಚಿವ ಜಗದೀಶ್ ನಾಯ್ಡುವನ್ನು ಗುರುವಾರ ರಾತ್ರಿ ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ನಾಯ್ಡು ಕುಸಿದು ಬಿದ್ದು ತನಗೆ ಎದೆ ನೋವು ಇದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಎಂದು ನ್ಯಾಯಾಂಗ ಬಂಧನ ತಪ್ಪಿಸಿಕೊಳ್ಳಲು ನಾಟಕ ಮಾಡಿದ ಪ್ರಸಂಗ ನಡೆದಿದೆ.
ಜಡ್ಜ್ ಮನೆಯಲ್ಲೇ ನಾಯ್ಡು ಕುಸಿದು ಬಿದ್ದಾಗ, ಆತನ ಬೆಂಬಲಿಗರು ಆಸ್ಪತ್ರೆಗೆ ಸೇರಿಸುವಂತೆ ಮನವಿ ಮಾಡಿಕೊಂಡರು. ಆದರೆ ನ್ಯಾಯಾಧೀಶರು ಆ ಒತ್ತಾಯಕ್ಕೆ ಸೊಪ್ಪು ಹಾಕದೆ ಜೈಲಿನಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದರು.
ಲಂಚ ನೀಡಿದ ಪ್ರಕರಣದ ಕುರಿತಂತೆ ನ್ಯಾಯಾಧೀಶರು ಕಟ್ಟಾ ಜಗದೀಶ್‌ಗೆ ಅಕ್ಟೋಬರ್ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ಅಂತೂ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಳ್ಳಲು ಕಟ್ಟಾ ಬೆಂಬಲಿಗರು ಎದೆ ನೋವಿನ ನೆಪ ಹೇಳಿ ನಾಟಕವಾಡುವಂತೆ ಉಪಾಯ ಹೇಳಿಕೊಟ್ಟಿದ್ದರು. ಅದರಂತೆ ನ್ಯಾಯಾಧೀಶರ ಮನೆಯಲ್ಲಿ ತನಗೆ ಎದೆ ನೋವು, ಶುಗರ್, ಬಿಪಿ ಇದ್ದು, ತನಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿಕೊಂಡರು ಕೂಡ ನ್ಯಾಯಾಧೀಶರು ಜೈಲಿನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚನೆ ನೀಡಿರುವುದು ನಾಟಕ ಠುಸ್ ಆದಂತಾಗಿದೆ. ಏತನ್ಮಧ್ಯೆ ಜಾಮೀನು ನೀಡುವಂತೆ ಕೋರಿ ನಗರ ಸಿವಿಲ್ ಕೋರ್ಟ್‌ಗೆ ಕಟ್ಟಾ ಜಗದೀಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿಯೂ ಕೂಡ ಮಾಜಿ ಸಚಿವ ಹರತಾಳು ಹಾಲಪ್ಪ ಕೂಡ ಎದೆನೋವು, ಜ್ವರ...ಹೀಗೆ ನಾನಾ ನೆಪವೊಡ್ಡಿ ಬಂಧನದಿಂದ ನುಣುಚಿಕೊಂಡಿದ್ದರು. ಅದೇ ರೀತಿ ಲಂಚ ಪುರಾಣದಲ್ಲಿ ಸಿಕ್ಕಿಬಿದ್ದ ಶಾಸಕ ಸಂಪಂಗಿ ಕೂಡ ಎದೆನೋವಿನ ಕಾರಣವೊಡ್ಡಿ ಬಂಧನ ತಪ್ಪಿಸಿಕೊಂಡಿರುವ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ: ಏತನ್ಮಧ್ಯೆ ಲಂಚ ನೀಡಿಕೆ ಪ್ರಕರಣದಲ್ಲಿ ಕಟ್ಟಾ ಜಗದೀಶನನ್ನು ಮಧ್ಯರಾತ್ರಿಯವರೆಗೂ ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲು ಲೋಕಾಯುಕ್ತ ಅಧಿಕಾರಿಗಳು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಚಿತ್ರೀಕರಣ ಮಾಡದಂತೆ ನಾಯ್ಡು ಬೆಂಬಲಿಗರು ಧಮಕಿ ಹಾಕಿ ಹಲ್ಲೆ ನಡೆಸಲು ಮುಂದಾದ ಘಟನೆ ಗುರುವಾರ ರಾತ್ರಿ ನಡೆದಿತ್ತು.
ನಾಯ್ಡು ಮಾಧ್ಯಮಗಳ ಚಿತ್ರೀಕರಣಕ್ಕೆ ಸಿಗದಂತೆ ಸಾಕಷ್ಟು ಹರಸಾಹಸ ಮಾಡುತ್ತಿದ್ದರು. ಆದರೆ ಮಾಧ್ಯಮ ಪ್ರತಿನಿಧಿಗಳು ಕಸರತ್ತು ನಡೆಸಿ ಚಿತ್ರೀಕರಣ ಮಾಡಲು ಮುಂದಾದಾಗ ಆತನ ಬೆಂಬಲಿಗರು ಹಲ್ಲೆ ನಡೆಸಲು ಮುಂದಾದ ಘಟನ ನಡೆದಿತ್ತು.
ಕಟ್ಟಾ ಸುಬ್ರಹ್ಮಣ್ಯ ಕ್ಷಮೆಯಾಚನೆ: ಪುತ್ರ ಜಗದೀಶ್ ನಾಯ್ಡು ಬೆಂಬಲಿಗರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆಂಬ ಘಟನೆ ಕುರಿತಂತೆ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಬಹಿರಂಗವಾಗಿ ಮಾಧ್ಯಮ ಮಿತ್ರರ ಕ್ಷಮೆಯಾಚಿಸಿದ್ದಾರೆ.