ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಆಡಳಿತಾರೂಢ ಬಿಜೆಪಿ ಸರಕಾರ ಆಲಿಬಾಬಾ ಮತ್ತು 40 ಜನ ಕಳ್ಳರ ಕೂಟವಾಗಿದೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ದಸರಾ ಪ್ರಯುಕ್ತ ಮೊದಲ ಬಾರಿಗೆ ಬೆಂಗಳೂರಿನಿಂದ ಮೈಸೂರಿಗೆ ಆರಂಭವಾದ ಕಿಂಗ್ ಫಿಶರ್ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ಮಾತ್ರವಲ್ಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೆಐಎಡಿಬಿ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಪುತ್ರರ ಹೆಸರಿಗೆ ಜಮೀನು ನೀಡುವಲ್ಲಿ ನೇರ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಇದೊಂದು ಆಲಿಬಾಬಾ ಮತ್ತು 40 ಜನ ಕಳ್ಳರ ಕೂಟದ ಸರಕಾರವಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಸರಕಾರದಲ್ಲಿನ ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಇದರಲ್ಲಿ ಸಚಿವರ, ಮುಖ್ಯಮಂತ್ರಿಗಳ ಮಕ್ಕಳು ಕೂಡ ಶಾಮೀಲಾಗಿದ್ದಾರೆ. ಇದೀಗ ಒಂದೊಂದಾಗಿ ಬಿಜೆಪಿ ಸರಕಾರದ ಭ್ರಷ್ಟಾಚಾರ ಬಯಲಿಗೆ ಬರುತ್ತಿದೆ ಎಂದರು.