ಮಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ ನಂತರ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಅವರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ. ಕೆಐಎಡಿಬಿ ಹಗರಣದಲ್ಲಿ ಸಚಿವ ಕಟ್ಟಾ ಪತ್ನಿ ಸರಕಾರಿ ಭೂಮಿಗೆ ನಾಲ್ಕು ಕೋಟಿ ರೂಪಾಯಿ ಪರಿಹಾರ ಪಡೆದಿದ್ದಾರೆ ಎಂದು ಲೋಕಾಯುಕ್ತರು ಬಾಂಬ್ ಸಿಡಿಸಿದ್ದಾರೆ.
ಇದರೊಂದಿಗೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) 106 ಕೋಟಿ ರೂಪಾಯಿಗಳ ಹಗರಣದಲ್ಲಿ ಕಟ್ಟಾ ಕುಟುಂಬವೇ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಜಾಲ ಹೋಬಳಿಯಲ್ಲಿ ಸಚಿವರ ಪತ್ನಿ ಸೌಭಾಗ್ಯ ನಾಯ್ಡು ಅವರು ಒಂಬತ್ತು ಲಕ್ಷ ರೂಪಾಯಿಗಳಿಗೆ ಖರೀದಿಸಿದ ಜಮೀನಿಗೆ ಭೂ ಸ್ವಾಧೀನದ ಪರಿಹಾರ ರೂಪದಲ್ಲಿ ಸರಕಾರದಿಂದ ನಾಲ್ಕು ಕೋಟಿ ರೂಪಾಯಿ ಪಡೆದಿದ್ದಾರೆ.
ಸಚಿವರ ಪತ್ನಿ ಸೌಭಾಗ್ಯ ಖರೀದಿಸಿರುವುದು ವಂಚನೆಯ ಹಾದಿ ಮೂಲಕ. ಅಂದರೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಭೂಮಿಯನ್ನು ಖರೀದಿಸಿದಂತೆ ನಾಟಕ ಮಾಡಿ ಸರಕಾರದಿಂದ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ತಿಳಿಸಿದ್ದಾರೆ.
ಸಚಿವ ಕಟ್ಟಾ ಅವರ ಪತ್ನಿ ಸರಕಾರಿ ಭೂಮಿಗೆ ನಾಲ್ಕು ಕೋಟಿ ರೂಪಾಯಿಗಳ ಪರಿಹಾರ ಪಡೆದಿದ್ದರು. ಆದರೆ ಅದು ಸರಕಾರಿ ಭೂಮಿ ಎಂಬುದು ಪತ್ತೆಯಾದ ನಂತರ ಅದನ್ನು ಸರಕಾರವು ವಶಕ್ಕೆ ಪಡೆದಿರುವುದು ದಾಖಲೆಗಳಿಂದ ಗೊತ್ತಾಗಿದೆ. ಸೌಭಾಗ್ಯ ಅವರು ಜಮೀನು ಖರೀದಿಸಿದ್ದಾರೆ ಎಂದು ತೋರಿಸುವ ದಾಖಲೆಗಳಿವೆ. ಆದರೆ ಈ ಭೂಮಿಯನ್ನು ಸಚಿವರ ಪತ್ನಿಗೆ ಮಾರಾಟ ಮಾಡಿದವರು ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ. ಆಶ್ಚರ್ಯವೆಂದರೆ ಸರಕಾರ ಭೂಮಿಯನ್ನು ವಾಪಸ್ ಪಡೆದುಕೊಂಡರೂ, ಪರಿಹಾರದ ಮೊತ್ತವನ್ನು ಕಟ್ಟಾ ಪತ್ನಿಯಿಂದ ಮರು ವಸೂಲಿ ಮಾಡಿಲ್ಲ ಎಂದು ಲೋಕಾಯುಕ್ತ ಬಹಿರಂಗಪಡಿಸಿದರು.
ಹಗರಣದಲ್ಲಿ ಕಟ್ಟಾ ಸುಬ್ರಹಣ್ಯನಾಯ್ಡು ಪಾಲ್ಗೊಂಡಿದ್ದಾರೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಸಚಿವರು ಬಹುಶಃ ಉದಾರ ಮನಸ್ಸಿನವರು. ತಮಗಿಂತ ಪತ್ನಿಯ ಮೇಲೆಯೇ ನಂಬಿಕೆ ಜಾಸ್ತಿ ಎಂದೆನಿಸುತ್ತಿದೆ ಎಂದು ಚಟಾಕಿ ಹಾರಿಸಿದರು.
ಕಟ್ಟಾ ಅವರು ಕೈಗಾರಿಕಾ ಸಚಿವರಾಗಿದ್ದ ವೇಳೆ ಜಮೀನುಗಳನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ, ಅದನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಗೆ ನೀಡಿ ಕೋಟ್ಯಂತರ ರೂಪಾಯಿ ಪರಿಹಾರ ಪಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಲೋಕಾಯುಕ್ತರು ಹೇಳಿದ್ದಾರೆ.