ರಾಜ್ಯದ ಬಿಜೆಪಿ ಸರಕಾರಕ್ಕೆ ಸಂಕಷ್ಟಗಳು ಮುಗಿದಂತೆ ಕಾಣುತ್ತಿಲ್ಲ. ವೈದ್ಯಕೀಯ ನೇಮಕಾತಿ ಹಗರಣ ಮತ್ತು ಕೆಐಎಡಿಬಿ ಹಗರಣ ಬಯಲಾದ ಬೆನ್ನಿಗೆ ಬಿಡಿಎ ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಅವ್ಯವಹಾರಗಳು ನಡೆದಿರುವ ಬಗ್ಗೆ ಶಂಕೆಗಳು ಹುಟ್ಟಿಕೊಂಡಿವೆ.
ಈ ಬಗ್ಗೆ ವಿವರಗಳನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುಟುಂಬವೇ ಹಗರಣದಲ್ಲಿ ಭಾಗಿಯಾಗಿದೆ. ಹಾಗಾಗಿ ತಕ್ಷಣವೇ ಮುಖ್ಯಮಂತ್ರಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೆ.ಆರ್. ಪುರ ತಾಲೂಕಿನ ರಾಚೇನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ 7 ಎಕರೆ 35.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ. ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆಂದು ಬಿಡಿಎ ಸ್ವಾಧೀನಪಡಿಸಿಕೊಂಡು ರಸ್ತೆಗಳನ್ನು ನಿರ್ಮಿಸಿ ನಿವೇಶನಗಳ ಸಂಖ್ಯೆಯನ್ನೂ ಗುರುತು ಮಾಡಿದ್ದ ಭೂಮಿಯನ್ನು ಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು ಜೆಡಿಎಸ್ ಮುಖ್ಯಸ್ಥ ಆರೋಪಿಸಿದ್ದಾರೆ.
ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಮುಖ್ಯಮಂತ್ರಿಯವರ ಸಹಿಯಲ್ಲಿರುವ ಬದಲಾವಣೆ. ಇದನ್ನು ಎಚ್‌ಡಿಕೆಯವರು ನಕಲಿ ಸಹಿ ಎಂದೇ ಕರೆದಿದ್ದಾರೆ. ಫೋರ್ಜರಿ ಸಹಿ ಮೂಲಕ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಚೇನಹಳ್ಳಿಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ್ದು ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್. ಬಿಡಿಎ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾದ ನಂತರ ಭೂಮಿ ಖರೀದಿಸಿದ್ದರು. ಬಡಾವಣೆ ನಕ್ಷೆಗೆ ಅನುಮೋದನೆ ನೀಡಿದ ಬಳಿಕ ಅದನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಇದರಲ್ಲಿ ಯಡಿಯೂರಪ್ಪನವರ ಕೈವಾಡವೂ ಇರಬಹುದು ಎಂದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದಿರುವುದು ಒಂದೆರಡು ಎಕರೆ ಡಿನೋಟಿಫಿಕೇಷನ್ ಅಲ್ಲ, ಬರೋಬ್ಬರಿ 600 ಎಕರೆ ಜಮೀನು ಡಿನೋಫಿಫೈ ಆಗಿದೆ. ಈ ಹಗರಣದ ಒಟ್ಟು ಮೊತ್ತ 5,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಈ ಸಂಬಂಧ ಲೋಕಾಯುಕ್ತರು ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗುತ್ತದೆ. ಮುಖ್ಯಮಂತ್ರಿಯವರು ತಕ್ಷಣವೇ ರಾಜೀನಾಮೆ ಸಲ್ಲಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.