ರಾಜ್ಯದ ನಾನಾ ಇಲಾಖೆಗಳಲ್ಲಿರುವ ಮೋಡಿ ಲಿಪಿಯಲ್ಲಿನ ಕಾಗದ ಪತ್ರಗಳನ್ನು ಕನ್ನಡಕ್ಕೆ ಅನುವಾದಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕ್ಕತಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಪಂ ಸಭಾ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಇಲಾಖೆಗಳಲ್ಲಿ ಮಹತ್ವದ ದಾಖಲೆಗಳೆಲ್ಲ ಮೋಡಿ ಲಿಪಿಯಲ್ಲಿರುವುದರಿಂದ ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮೋಡಿ ಲಿಪಿಯಲ್ಲಿರುವ ಎಲ್ಲ ಕಾಗದ ಪತ್ರಗಳನ್ನು ಕನ್ನಡಕ್ಕೆ ಅನುವಾದಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಹಂಚಿಕೆ ಸಂಖ್ಯೆ ಹೆಚ್ಚಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ವರ್ಷಗಳಿಂದ ಪ್ರಶಸ್ತಿ ಹಂಚಿಕೆ ಆಗಿಲ್ಲ. ಬೇಕಾಬಿಟ್ಟಿಯಾಗಿ ಪ್ರಶಸ್ತಿ ವಿತರಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರನ್ನು ಗುರುತಿಸಿ ವಿತರಿಸಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಜಾನಪದ ವಿಶ್ವ ವಿದ್ಯಾಲಯದ ಸ್ಥಾಪನೆ ವಿಷಯದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿ, ವಿವಿಗೆ ವಿಶೇಷ ಅಧಿಕಾರಿ ನೇಮಕ ಮಾಡಲಾಗಿದೆ. ವಿವಿಯ ರೂಪುರೇಷೆ, ಜಾನಪದ ಕೋರ್ಸ್ಗಳ ಆರಂಭದ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ವಿವಿಯನ್ನು ಎಲ್ಲಿ ಸ್ಥಾಪಿಸಬೇಕು ಎನ್ನುವ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಈ ಬಗ್ಗೆ ಆದಷ್ಟು ಬೇಗ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಜಾನಪದ ಸಾಹಿತ್ಯ, ಸಂಸ್ಕ್ಕತಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಡಲಾಗುವುದು. ಹಳಗನ್ನಡ ಸಾಹಿತ್ಯ, ವಚನಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಆ ನಿಟ್ಟಿನಲ್ಲಿ ಪ್ರೌಢಶಾಲೆ ಹಂತದಲ್ಲಿ ಹಳಗನ್ನಡ ಸಾಹಿತ್ಯ ಕುರಿತು ಪಠ್ಯದಲ್ಲಿ ಅಳವಡಿಸುವ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.