ತಾಲೂಕಿನ ಹಲಗಾ-ಬಸ್ತವಾಡ ಬಳಿ ನಿರ್ಮಾಣವಾಗುತ್ತಿರುವ ಸುವರ್ಣಸೌಧ ಕಟ್ಟಡದಲ್ಲೇ ಈ ವರ್ಷದ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.
ಸುವರ್ಣಸೌಧ ಕಟ್ಟಡದ ಕಾಮಗಾರಿ ಪರೀಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 35 ಸಚಿವರು, 35 ಅಧಿಕಾರಿಗಳ ಕೊಠಡಿಗಳು ಮತ್ತು ನೆಲಮಹಡಿ ಕಟ್ಟಡ ಒಳಗೊಂಡು ಮೊದಲ ಹಂತದ ನಿರ್ಮಾಣ ಕಾಮಗಾರಿ ಬರುವ ಡಿಸೆಂಬರಿನೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಇದೇ ಹಂತದ ಇತರೆ ಕೆಲಸಗಳು ಮುಂದಿನ ಆರು ತಿಂಗಳಲ್ಲಿ ಮುಗಿಯುತ್ತವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಒಳ ಆವರಣದ ವಿದ್ಯುತ್ ಸಂಪರ್ಕ, ಹವಾನಿಯಂತ್ರಣ, ಪೀಠೋಪಕರಣದ ಕೆಲಸಗಳಿಗೆ ಅಕ್ಟೋಬರ್ 4ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ದೊರೆಯಲಿದೆ ಎಂದು ತಿಳಿಸಿದರು.
ಒಟ್ಟು 230 ಕೋಟಿ ರೂ.ಗಳಿಗೆ ಈ ಯೋಜನೆ ತಯಾರಿಸಲಾಗಿತ್ತು. ಈಗಾಗಲೇ 102 ಕೋಟಿ ರೂ. ವೆಚ್ಚವಾಗಿದೆ. ಒಳ ಆವರಣದ ಕೆಲಸ, ರಸ್ತೆ, ಪೀಠೋಪಕರಣ, ಕಂಪೌಂಡ್ ಸೇರಿ ಇತರೆ ಕೆಲಸಗಳಿಗಾಗಿ ಪರಿಷ್ಕ್ಕತ ವೆಚ್ಚ 415 ಕೋಟಿ ರೂ. ಅಂದಾಜಿಸಲಾಗಿದ್ದು, ಈ ಬಗ್ಗೆ ಸರಕಾರದ ಮುಂದೆ ಬೇಡಿಕೆ ಇಡಲಾಗುತ್ತದೆ ಎಂದರು.
ನಿರ್ಮಾಣದ ಮೂರನೇ ಹಂತದಲ್ಲಿ ಗಾರ್ಡನ್, ಶಾಸಕರ ಭವನ ಮತ್ತು ಇತರೆ ಪೂರಕ ಕಟ್ಟಡಗಳು ಬರುತ್ತವೆ. ಗುತ್ತಿಗೆದಾರರು ಕಾಮಗಾರಿಗಳನ್ನು ಸರಿಯಾಗಿ ನಡೆಸಿದ್ದಾರೆ. ಪರೀಶೀಲನೆ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ತಿಳಿಸಿದರು.