ಭಕ್ತರು ಮನಃಶಾಂತಿಗೆ ಮಠಗಳಿಗೆ ಭೇಟಿ ನೀಡುವುದು ಒಳ್ಳೆಯ ಸಂಪ್ರದಾಯ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಮುರುಘಾಮಠಕ್ಕೆ ಭೇಟಿ ನೀಡಿದ ಸಚಿವರು ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಮಠಕ್ಕೆ ಬರುವುದರಿಂದ ಸ್ವಾಮೀಜಿಗಳ ದರ್ಶನ, ಆಶೀರ್ವಾದ ದೊರೆಯುತ್ತದೆ. ಮಠಕ್ಕೆ ಭೇಟಿ ನೀಡುವುದು ಇದೇ ಮೊದಲಲ್ಲ. ನಾನು 30 ವರ್ಷದಿಂದ ಈ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದೇನೆ ಎಂದರು.
ಮಠದಲ್ಲಿದ್ದು ಶಿಕ್ಷಣ ಪಡೆದ ವ್ಯಕ್ತಿ ನಾನು. ಹೀಗಾಗಿ ಮಂತ್ರಿಯಾದ ಮೇಲೆ ಮಠಗಳಿಗೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ತಪ್ಪಿಲ್ಲ. ವೀರಶೈವ ಮಠಗಳಲ್ಲದೇ ಎಲ್ಲ ಸಮುದಾಯದ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆಯುತ್ತೇನೆ ಎಂದು ಸಚಿವರು ಸಮರ್ಥಿಸಿಕೊಂಡರು.
ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಸ್ಥಾನದ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ, ಈ ವಿಷಯ ಮುಗಿದ ಅಧ್ಯಾಯ. ಯುವಕರಿಗೆ ಆದ್ಯತೆ ನೀಡಬೇಕೆಂದು ಸಂಸದ ರಾಘವೇಂದ್ರಗೆ ಸ್ಥಾನ ನೀಡಲಾಗಿದೆ. ಭೀಮಣ್ಣ ಖಂಡ್ರೆ ಸಹ ಇದನ್ನು ಸ್ವಾಗತಿಸಿದ್ದಾರೆ. ಯುವ ಅಧ್ಯಕ್ಷರು ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂತ್ರಿ ಮಾಡಬೇಕೆಂದು ಯಾರಿಗೂ ಯಾರೂ ಒತ್ತಡ ಹಾಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.