ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಡಿನೋಟಿಫೈ ಹಗರಣ; ಕೃಷ್ಣ, ಧರಂ, ಎಚ್‌ಡಿಕೆ ಮಾಡಿದ್ದೆಷ್ಟು? (Denotification | Yedyurappa | HD Kumaraswamy | Dharam Singh)
Bookmark and Share Feedback Print
 
ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ಸರಕಾರವನ್ನು ಅಮುಕುವಲ್ಲಿ ನಾ ಮುಂದು, ತಾ ಮುಂದು ಎಂದು ಮಾಜಿ ಮುಖ್ಯಮಂತ್ರಿಗಳಾದಿಯಾಗಿ ಮುಗಿ ಬೀಳುತ್ತಿರುವ ಹೊತ್ತಿನಲ್ಲೇ ನಮ್ಮ ಮುಖ್ಯಮಂತ್ರಿ ಮಾಡಿರುವ ಸಾಧನೆಗಳು ಬಹಿರಂಗವಾಗಿವೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಬರುತ್ತಿರುವ ಹೊತ್ತಿಗೆ ಕಳೆದ ನಾಲ್ವರು ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಆಡಳಿತದ ಅವಧಿಯಲ್ಲಿ ನಡೆದಿರುವ ಡಿನೋಟಿಫೈ ಜಮೀನು ಎಷ್ಟು ಎಂಬ ಕುರಿತು ಖಾಸಗಿ ಸುದ್ದಿವಾಹಿನಿಯೊಂದು ತನಿಖಾ ವರದಿ ಪ್ರಕಟಿಸಿದೆ.

ಅದರ ಪ್ರಕಾರ ಕಳೆದ 10 ವರ್ಷಗಳ ಅವಧಿಯಲ್ಲಿ 830 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಇದರಲ್ಲಿ ಈಗ ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡುತ್ತಿರುವ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪಾಲು ಕಡಿಮೆಯೇನಲ್ಲ ಎನ್ನುವುದು ಪ್ರಮುಖವಾದದ್ದು.

ಎಸ್.ಎಂ. ಕೃಷ್ಣ ಅವರು 11-10-1999ರಿಂದ 6-6-2004ರವರೆಗೆ ಮುಖ್ಯಮಂತ್ರಿಯಾಗಿದ್ದ ವೇಳೆ 251.32 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರು. ಇತ್ತೀಚಿನ ನಾಲ್ವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಅತೀ ಹೆಚ್ಚು ಡಿನೋಟಿಫೈ ಆದ ದಾಖಲೆ ಇವರ ಹೆಸರಿನಲ್ಲೇ ಇದೆ.

ನಂತರ 7-6-2004ರಿಂದ 3-2-2006ರವರೆಗೆ ಮುಖ್ಯಮಂತ್ರಿಯಾಗಿದ್ದ ಎನ್. ಧರಂ ಸಿಂಗ್ ಅವರು 133.02 ಎಕರೆ ಭೂಯಿಯನ್ನು ಡಿನೋಟಿಫೈ ಮಾಡಿದ್ದರು. ನಾಲ್ವರು ಮುಖ್ಯಮಂತ್ರಿಗಳ ಪೈಕಿ ಅತೀ ಕಡಿಮೆ ಡಿನೋಟಿಫೈ ಮಾಡಿದವರು ಧರಂ ಸಿಂಗ್.

ಜೆಡಿಎಸ್‌-ಬಿಜೆಪಿ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು 4-2-2006ರಿಂದ 9-10-2007ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅವರು ಕೇವಲ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರೂ, 166.57 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ 'ಖ್ಯಾತಿ'ಗೆ ಪಾತ್ರರಾಗಿದ್ದಾರೆ.

ಬಿಜೆಪಿ - ಜೆಡಿಎಸ್ ಮುನಿಸಿನಿಂದ ಸರಕಾರ ಬಿದ್ದ ಬಳಿಕದ ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಅಂದರೆ ರಾಮೇಶ್ವರ ಠಾಕೂರ್ ಅವರು ರಾಜ್ಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ 9-10-2007ರಿಂದ 30-5-2008ರ ನಡುವೆ 110.37 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿಸಿದ್ದರು.

ಇನ್ನು ಪ್ರಸಕ್ತ ಆರೋಪ ಎದುರಿಸುತ್ತಿರುವ ಬಿ.ಎಸ್. ಯಡಿಯೂರಪ್ಪನವರ ಪಾಲು 171.36 ಎಕರೆ. 1-6-2008ರಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು, ಅಂದಿನಿಂದ ಅಂದರೆ ಸುಮಾರು ಎರಡೂಕಾಲು ವರ್ಷದಲ್ಲಿ ಸುಮಾರು 171 ಎಕರೆ ಜಮೀನಿಗೆ ಡಿನೋಟಿಫೈ ಮಾಡಿದ್ದಾರೆ.

ನಾನು ಅಕ್ರಮ ಮಾಡಿಲ್ಲ...
ಹೀಗೆಂದು ಪ್ರತಿಕ್ರಿಯೆ ನೀಡಿರುವುದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್. ತನ್ನ ಅವಧಿಯಲ್ಲಿ 133.02 ಎಕರೆ ಜಮೀನು ಡಿನೋಟಿಫೈ ಆಗಿತ್ತು ಎನ್ನುವ ವರದಿಗಳಿಗೆ ಉತ್ತರಿಸಿದ ಅವರು, ತಾನು ಯಾವುದೇ ರೀತಿಯ ಅಕ್ರಮಗಳನ್ನು ಎಸಗಿಲ್ಲ ಎಂದಿದ್ದಾರೆ.

ಡಿನೋಟಿಫಿಕೇಷನ್ ಮಾಡಿರುವುದು ಹೌದು. ಆದರೆ ಅದು ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಲಾಗಿತ್ತು. ನಮಗೆ ಜನತೆಯ ಹಿತ ಮುಖ್ಯವಾಗುವ ಸಂದರ್ಭದಲ್ಲಿ ಕೆಲವು ಯೋಜನೆಗಳನ್ನು ಕೈ ಬಿಡಬೇಕಾಗುತ್ತದೆ. ನಾನೇನೂ ನಮ್ಮ ಮನೆಯವರಿಗೆ, ಸಂಬಂಧಿಕರಿಗೆ ಅಥವಾ ಆಪ್ತರಿಗೆ ಜಮೀನುಗಳನ್ನು ಹಂಚಿಲ್ಲ ಎಂದು ಧರಂ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ