ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾನಸಿಕ ಅಸ್ವಸ್ಥತೆ; ಅವರಿಗೆ ಮಾತಿನ ಮೇಲೆ ದೃಢತೆಯಿಲ್ಲ, ಕುರ್ಚಿ ಅಲುಗಾಡುತ್ತಿದೆ ಎಂದೆಲ್ಲಾ ವಾಚಮಾಗೋಚರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವರಾಗಿ ಆಯ್ಕೆಯಾದ ನಂತರ ಸೌಹಾರ್ದಯುತ ಭೇಟಿಗಾಗಿ ಗೌಡರ ಮನೆಗೆ ತೆರಳಿದ್ದ ರಾಮದಾಸ್ ಎದುರೇ ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಈ ಹೊತ್ತಿನಲ್ಲಿ ಸಚಿವರು ಸಮಾಧಾನಪಡಿಸಲು ಯತ್ನಿಸಿದರಾದರೂ, ಬಿಜೆಪಿ ಶಾಸಕ ಮಾತ್ರ ತಣ್ಣಗಾಗದೆ ಖಾಸಗಿ ವಾಹಿನಿಯೊಂದರಲ್ಲಿ ತನ್ನ ವಾಗ್ದಾಳಿ ಮುಂದುವರಿಸಿದರು.
ನಾನು ದಸರಾ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಅವರ ಕುರ್ಚಿ ಅಲುಗಾಡುತ್ತಿದೆ. ಕೊಡುಗೈ ದಾನಿ ಎನಿಸಿಕೊಂಡಿದ್ದ ಮುಖ್ಯಮಂತ್ರಿಗಳು ತನ್ನ ಕೆಲವು ಸಹಚರರಿಂದಾಗಿ ಪ್ರಾಮಾಣಿಕ ವ್ಯಕ್ತಿಗಳಿಗೆ ಕೊಡಲಿಯೇಟು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪನವರಿಗೆ ತನ್ನ ಮಾತಿನಲ್ಲಿ ದೃಢತೆಯಿಲ್ಲ. ನಾನು ನಾಲ್ಕು ಬಾರಿ ಸತತ ಶಾಸಕನಾಗಿ ಆಯ್ಕೆಯಾದವನು. ಮೇಯರ್ ಕೂಡ ಆಗಿದ್ದೆ. ಸಂಪುಟ ವಿಸ್ತರಣೆ ಸಂದರ್ಭಗಳಲ್ಲಿ ಗೋಗರೆದರೂ ನನ್ನನ್ನು ನಿರ್ಲಕ್ಷಿಸಲಾಗಿದೆ. ಪಕ್ಷವು ಅನುಸರಿಸಿರುವ ಮಾನದಂಡ ಸರಿಯಾಗಿಲ್ಲ. ಅನರ್ಹರಿಗೆ ಕೊಡುವ ಬದಲು ನನಗೆ ಸಚಿವಗಿರಿ ಕೊಡಿ ಎಂದು ಕೇಳುತ್ತಿದ್ದೇನೆ ಎಂದರು.
ಯಡಿಯೂರಪ್ಪನವರ ಕಪಿ ಮುಷ್ಠಿಯಿಂದ ಬಿಜೆಪಿಯು ಘನತೆ, ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟ ಶಂಕರಲಿಂಗೇಗೌಡರು, ನಾನು ಅಧಿಕಾರಕ್ಕಾಗಿ ಈ ಹೇಳಿಕೆ ನೀಡುತ್ತಿಲ್ಲ. ಅದಕ್ಕಾಗಿ ಆಸೆ ಪಟ್ಟವನು ನಾನಲ್ಲ. ನನ್ನ ಉದ್ದೇಶ ಜನಸೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರು ಎಡವಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಸಹಾಯ ಮಾಡುತ್ತಿರುವ ಅವರು ನನಗೆ ಮಾತ್ರ ಮೋಸ ಮಾಡಿದರು. ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ತಿಳಿಯುತ್ತಿಲ್ಲ. ನಾನು ಮಂಡ್ಯದವನೆಂದು ಹೀಗೆ ಮಾಡಿದರೋ ಅಥವಾ ಒಕ್ಕಲಿಗನೆಂದು ಮಾಡಿದರೋ? ನಾನು ಯಾವ ರೀತಿಯ ಅನ್ಯಾಯವನ್ನು ಮಾಡಿದ್ದೇನೆ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಇದು ನನ್ನ ಅಭಿಪ್ರಾಯವಲ್ಲ, ಮತದಾರರ ಅಭಿಪ್ರಾಯ. ನಾನು ಬಿಜೆಪಿಗೆ ಮಾರಕವಲ್ಲ, ಪೂರಕ. ನೋವನ್ನು ಬಚ್ಚಿಟ್ಟುಕೊಳ್ಳದೆ ಬಿಚ್ಚಿದ್ದೇನೆ. ನಾನು ಬೀದಿಗೆ ಬಂದಿರುವುದು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸುವುದಾದರೆ ತೊಂದರೆಯಿಲ್ಲ. ನಾನಂತೂ ರಾಜೀನಾಮೆ ನೀಡುವುದಿಲ್ಲ. ಬೇಕಾದರೆ ಯಾವ ಕ್ರಮವನ್ನಾದರೂ ತೆಗೆದುಕೊಳ್ಳಬಹುದು ಎಂದರು.