ಸದಾ ಒಂದಲ್ಲ ಒಂದು ವಿಷಯದ ಬಗ್ಗೆ ಟೀಕಿಸುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶನಿವಾರ ರಾಜಕೀಯ ವಿಷಯ ಮಾತನಾಡಲು ನಿರಾಕರಿಸಿ ಅಚ್ಚರಿಹುಟ್ಟಿಸಿದ್ದಲ್ಲದೆ, ರಘುಪತಿ ರಾಘವ ರಾಜಾರಾಮ್ ಸೇರಿದಂತೆ ಇನ್ನಿತರೆ ಗೀತೆಗಳಿಗೆ ತಲೆಯಾಡಿಸಿ ತಾಳ ಹಾಕಿದ ಅಪರೂಪದ ಘಟನೆ ನಡೆಯಿತು.
ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸರ್ವಧರ್ಮ ಪ್ರಾರ್ಥನಾ ಗೀತೆಗಳಿಗೆ ತಾಳ ಹಾಕಿದ ದೇವೇಗೌಡರು ರಾಜಕೀಯ ಮಾತನಾಡಲು ಒಲ್ಲೆ ಎಂದರು.
ಬೃಹತ್ ಬೆಂಗಳೂರು ನಗರ ಜನತಾದಳ ಶನಿವಾರ ಹಮ್ಮಿಕೊಂಡಿದ್ದ ಮಹಾತ್ಮಗಾಂಧೀಜಿ ಅವರ 141ನೇ ಜನ್ಮದಿನಾಚರಣೆ ಅಂಗವಾಗಿ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥನೆ, ಗಾಂಧಿ ಗೀತೆಗಳು, ಗೀತವಾಚನ, ಖುರಾನ್ ಹಾಗೂ ಬೈಬಲ್ ಪಠಣ ಆಲಿಸಿದ ದೇವೇಗೌಡರು ಹಾಡಿಗೆ ತಲೆಯಾಡಿಸಿ ತಾಳಹಾಕಿದರು.
ಗೀತಗಾಯನ ಮುಗಿದ ನಂತರ ಯಾವುದೇ ಹೇಳಿಕೆಯನ್ನು ನೀಡಲು ನಿರಾಕರಿಸಿದ ಅವರು ಪವಿತ್ರ ದಿನದಂದು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಬೇಡ. ನಾಳೆ ಮಾತನಾಡುವುದಾಗಿ ನಗರ ಅಧ್ಯಕ್ಷ ನಾರಾಯಣರಾವ್ ಅವರಿಂದ ಸೂಚನೆ ನೀಡಿಸಿದ್ದರು.
ಅಲ್ಲದೆ, ಕೈ ಸನ್ನೆಯಲ್ಲೇ ಇಂದು ಮಾತನಾಡುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹಸನ್ಮುಖದಿಂದಲೇ ಸೂಚಿಸಿದರು. ಕಾರ್ಯಕ್ರಮದಲ್ಲಿ ದೇವೇಗೌಡರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು.