ಕೆಐಎಡಿಬಿ ಹಗರಣ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿರುವ ಬೆನ್ನಲ್ಲೇ, ಹಗರಣದಲ್ಲಿ ವಸತಿ ಸಚಿವ ಕಟ್ಟಾ ಸುಬ್ಮಮಣ್ಯ ನಾಯ್ಡು ಶಾಮೀಲಾಗಿರುವುದು ಲೋಕಾಯುಕ್ತ ವರದಿಯಲ್ಲಿ ಬಹಿರಂಗಗೊಂಡರೆ ಆ ತೀರ್ಪಿಗೆ ತಲೆಬಾಗುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ತಿಳಿಸಿದ್ದಾರೆ.
ರಾಜ್ಯಪಾಲರು ಮತ್ತು ಲೋಕಾಯುಕ್ತರ ಬಗ್ಗೆ ತುಂಬಾ ಗೌರವವಿದೆ. ಅವರ ಯಾವುದೇ ಪ್ರತಿಕ್ರಿಯೆಗಳಿಗೆ ನಾನು ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 141ನೆ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಾಂಧಿಸ್ಮಾರಕ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ವರದಿಯಲ್ಲಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಪತ್ನಿ ಹಾಗೂ ಪುತ್ರ, ಕುಟುಂಬದ ಸದಸ್ಯರು ಶಾಮೀಲಾಗಿದ್ದರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ, ತನಿಖೆ ಪೂರ್ಣಗೊಂಡು ತೀರ್ಪು ಹೊರ ಬಂದ ಬಳಿಕ ಅದಕ್ಕೆ ತಲೆಬಾಗುವೆ ಎಂದರು.