ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಹಗರಣಗಳಿಗೆ ಸಂಬಂಧಪಟ್ಟ ಕಡತಗಳ ಪತ್ರವನ್ನು ಮಂಗಮಾಯ ಮಾಡಿದರೆ ಅಧಿಕಾರಿಗಳು ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಹೆಂಡತಿ ಮಕ್ಕಳು ಸರಿ ಇರಬೇಕು ಅಂದರೆ, ಯಾವ ಕಡತದಲ್ಲೂ ವ್ಯತ್ಯಾಸ ಮಾಡಬಾರದು ಎಂದು ಹೇಳಿದರು.
ಭೂ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಹೊರ ಬೀಳುತ್ತಿದ್ದಂತೆ ಕೆಲ ಅಧಿಕಾರಿಗಳು ಕಡತಗಳನ್ನು ತಪಾಸಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸೂಚನೆ ಮೇರೆಗೆ ಈ ಕೆಲಸ ನಡೆಯುತ್ತಿದೆ ಎನ್ನುವ ಮಾಹಿತಿ ಬಂದಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ತಪ್ಪು ಮಾಡಿದರೆ ಮುಂದೆ ನಿಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ಎಂದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಯಾವ್ಯಾವ ಕಡತದಲ್ಲಿ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಮಾಹಿತಿ ಕೇಳಿ ಪಡೆಯುವುದಕ್ಕೆ ಕಷ್ಟಪಡಬೇಕಾಗಿಲ್ಲ. ಆ ಪಕ್ಷದ ಕೆಲ ಸಚಿವರೇ ತಂದು ಕೊಡುತ್ತಿದ್ದಾರೆ ಎಂದು ಹೇಳಿದರು.
ಪಾಪ, ಕುಮಾರಸ್ವಾಮಿಯನ್ನು ನಂಬಿಸಿ ಸರಕಾರ ಮಾಡಿದ ಯಡಿಯೂರಪ್ಪ, ಐದು ಡಿಸ್ಟಲರಿಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಸೈಕಲ್ ಹಗರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲು ಇವರೇ ಅಡ್ಡ ಬಂದಿದ್ದರು ಎಂದು ದೂರಿದರು.
ಸುಳ್ಳು ಹೇಳಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿಕೊಂಡು ಬಂದಿರುವ ಸಿಎಂ ಪಾಪದ ಕೊಡ ತುಂಬುತ್ತ ಬಂದಿದೆ. ಈ ಸರಕಾರದ ಹಗರಣಗಳು ಧಾರವಾಹಿ ರೂಪದಲ್ಲಿ ಹೊರ ಬರಲಿವೆ. ತಮ್ಮ ಕುಟುಂಬಕ್ಕೆ ಅನುಕೂಲ ಮಾಡಿಕೊಳ್ಳಲು ಡಿ ನೋಟಿಫೈ ಮಾಡುವ ಸ್ವಜನ ಪಕ್ಷಪಾತ ಕೆಲಸವನ್ನು ಹಿಂದೆ ಯಾವ ಸಿಎಂ ಮಾಡಿರಲಿಲ್ಲ ಎಂದು ಹೇಳಿದರು.