ಕಾಂಗ್ರೆಸ್‌ನಲ್ಲಿ ಒಡಕು ಹಳೆಯ ಮಾತು: ಮಲ್ಲಿಕಾರ್ಜುನ ಖರ್ಗೆ
ಗುಲ್ಬರ್ಗ, ಭಾನುವಾರ, 3 ಅಕ್ಟೋಬರ್ 2010( 16:17 IST )
ಕಾಂಗ್ರೆಸ್ ಪಕ್ಷದಲ್ಲಿ ಒಡಕಿದೆ ಎಂಬುದು ಹಳೆಯ ಮಾತು. ನಾನು ಎರಡು ವರ್ಷಗಳ ಹಿಂದೆಯೇ ಹೀಗೆ ಹೇಳಿದ್ದೇನಲ್ಲ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಆದರೆ ಒಡಕನ್ನು ಹೋಗಲಾಡಿಸಲು ವರಿಷ್ಠರು, ಹಾಗೂ ಕೆಪಿಸಿಸಿ ಮುಖಂಡರು ಮೊದಲಿನಿಂದಲೂ ಒತ್ತು ನೀಡುತ್ತಿದ್ದಾರೆ ಎಂದರು.
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಕಾಂಗ್ರೆಸ್ ನಾಯಕರಲ್ಲಿನ ಒಡಕೇ ಕಾರಣ ಎಂಬ ಧರ್ಮಸಿಂಗ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅವರು ಹೇಳಿದ್ದು ಹೊಸದಲ್ಲ, ಮೊದಲಿನಿಂದಲೂ ಪಕ್ಷದಲ್ಲಿ ಇದೆ ಎಂಬುದು ನಮ್ಮಿಬ್ಬರ ಗಮನದಲ್ಲಿದೆ. ಮೊದಲು ನಾನು ಹೇಳಿದ್ದೆ, ಈಗ ಧರ್ಮಸಿಂಗ್ ಹೇಳಿದ್ದಾರೆ ಎಂದು ಹೇಳಿದರು.
ಹಿಂದೆ ಆಗಿದ್ದು ಆಗಿಹೋಯಿತು, ಮುಂದೆ ಆಗಲು ಅವಕಾಶ ನೀಡದೇ ಎಲ್ಲರೂ ಸೇರಿಕೊಂಡು ಕೆಲಸ ಮಾಡುತ್ತೇವೆ. ಮುಂಬರುವ ಜಿಪಂ, ತಾಪಂ ಮತ್ತು ಎಪಿಎಂಸಿ ಚುನಾವಣೆಗಳಿಗೆ ನಾವು ಸಜ್ಜಾಗಿದ್ದೇವೆ ಎಂದು ಖರ್ಗೆ ತಿಳಿಸಿದರು.
ಕಾಂಗ್ರೆಸ್ ಬಗ್ಗೆ ಜನರ ಒಲವು ಇದೆ. ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ರಾಜ್ಯ ನಾಯಕರು ಒತ್ತು ನೀಡುತ್ತಾರೆ. ಕೆಪಿಸಿಸಿಗೆ ಸಮರ್ಥ ಅಧ್ಯಕ್ಷರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ಹೊಸ ವ್ಯಕ್ತಿ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.