ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಮತ್ತಷ್ಟು ದಿನ ನಮ್ಮೊಂದಿಗೆ ಇದ್ದಿದ್ದರೆ ಭಾರತ ಮತ್ತಷ್ಟು ಬದಲಾವಣೆ ಕಾಣುತ್ತಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಹಾಗೂ ಸಾಮೂಹಿಕ ಭಜನೆ, ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿ ಗುರಿ ಈಡೇರುವವರೆಗೂ ಹಿಂದೇಟು ಹಾಕಲಿಲ್ಲ. ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯವಾಗಬೇಕೆಂಬ ಕನಸು ಸಾಕಾರವಾಗುವುದನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ಲಕ್ಷಾಂತರ ಜನರು ಗಾಂಧೀಜಿ ಪ್ರಭಾವದಿಂದ ಹೋರಾಟಕ್ಕೆ ಧುಮುಕಿದರು ಎಂದು ಸ್ಮರಿಸಿದರು.
ಶಾಸ್ತ್ರೀಜಿ ಮತ್ತಷ್ಟು ದಿನ ಪ್ರಧಾನಿಯಾಗಿದ್ದರೆ ಭಾರತ ಇನ್ನೂ ಅಭಿವೃದ್ಧಿ ಕಾಣುತ್ತಿತ್ತು. ಚೈನಾ ಯುದ್ಧದಲ್ಲಿ ಅವರು ಕೈಗೊಂಡ ದಿಟ್ಟ ನಿರ್ಣಯ ಇಂದಿಗೂ ಅವಿಸ್ಮರಣೀಯವಾಗಿದೆ. ತಾಷ್ಕೆಂಟ್ ಒಪ್ಪಂದದ ವೇಳೆ ಅವರು ನಿಧನ ಹೊಂದಿದ ವಿವಾದದ ಬಗ್ಗೆ ತನಿಖೆ ಮಾಡಲು ಯಾವ ಸರಕಾರವೂ ಮುಂದಾಗಿಲ್ಲ. ಭಾರತ ಆಹಾರ ಕೊರತೆ ಎದುರಿಸುತ್ತಿದ್ದಾಗ ಎಲ್ಲರೂ ಒಪ್ಪೊತ್ತಿನ ಉಪವಾಸ ಆಚರಣೆಗೆ ಕರೆ ನೀಡಿ ದೇಶಕ್ಕೆ ಹೊಸ ತಿರುವು ನೀಡಿದ್ದರು. ನೆಹರು ಮನೆತನಕ್ಕೆ ಸರಿಸಮನಾಗಿ ದೇಶ ಸೇವೆ ಮಾಡಿದರು ಎಂದು ಗುಣಗಾನ ಮಾಡಿದರು.