ಸರಕಾರ ತಪ್ಪು ಮಾಡಿದ್ದರೆ ವಿರೋಧ ಪಕ್ಷಗಳು ಬೆರಳು ಮಾಡಿ ತೋರಿಸಲಿ, ತಿದ್ದಿಕೊಳ್ಳಲು ಅವಕಾಶ ಕೊಡಲಿ. ಅವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ತನಿಖೆಯಾಗಲೆಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಸತ್ಯಾಂಶ ಹೊರಬರುವವರೆಗೂ ಪ್ರತಿಪಕ್ಷಗಳು ತಾಳ್ಮೆಯಿಂದ ಕಾಯಬೇಕು ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಭಾನುವಾರ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲು ಅಪಘಾತದ ಹೊಣೆ ಹೊತ್ತು ರಾಜೀನಾಮೆ ನೀಡಿದರು.ಆ ಮಾನದಂಡವನ್ನು ಈಗ ಎಲ್ಲರಿಗೂ ಅನ್ವಯಿಸಿದರೆ ಸರಕಾರವೇ ಬದಲಾಗಬೇಕಾಗುತ್ತದೆ. ಪ್ರತಿದಿನ ಒಬ್ಬೊಬ್ಬರು ರಾಜೀನಾಮೆ ಕೊಡುತ್ತಾ ಹೋದರೆ ಆಡಳಿತ ನಡೆಸುವುದು ಕಷ್ಟ. ಆರೋಪ ಬಂದಾಕ್ಷಣ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳ ಆಗ್ರಹಕ್ಕೆ ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ ಕೂಡಲೇ ಯಡಿಯೂರಪ್ಪ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಅಲ್ಲದೇ, ಕುಮಾರಸ್ವಾಮಿಯವರು ಎಷ್ಟು ಪ್ರಾಮಾಣಿಕರು, ಸಾಚಾ ಎಂಬುದನ್ನು ತಿಳಿದುಕೊಳ್ಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಯಾರೇ ಮಾಡಿದರೂ ತಪ್ಪು. ಜನತೆ ಕ್ಷಮಿಸುವುದಿಲ್ಲ. ಅವಕಾಶ ಬಂದಾಗ ಜನ ಪಾಠ ಕಲಿಸುತ್ತಾರೆ ಎಂದರು.