ಅವ್ಯವಹಾರ; ಸಿಎಂ ಸಿದ್ದಗಂಗಾಶ್ರೀ ಮೇಲೆ ಆಣೆ ಮಾಡ್ಲಿ: ರೇವಣ್ಣ
ಹಾಸನ, ಸೋಮವಾರ, 4 ಅಕ್ಟೋಬರ್ 2010( 11:08 IST )
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಂಕುಳಲ್ಲಿ ಫೈಲ್ ಇಟ್ಟುಕೊಂಡು ಬರುತ್ತಿದ್ದ ಯಡಿಯೂರಪ್ಪ ಐದು ಡಿಸ್ಟಿಲರಿ ಫ್ಯಾಕ್ಟರಿಗಳ ಮಂಜೂರಾತಿಗೆ ಸಹಿ ಹಾಕಿಸಿಕೊಂಡು ಹೋಗಲಿಲ್ಲವೇ. ಯಡಿಯೂರಪ್ಪ ಇಂತಹ ಅವ್ಯವಹಾರ ಮಾಡಿದ್ದಾರೆಯೋ ಇಲ್ಲವೋ ಎಂದು ಸಿದ್ದಗಂಗಾ ಶ್ರೀಗಳ ಮೇಲೆ ಆಣೆ ಮಾಡಿ ಹೇಳಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ತಾವೇ ಭೂ ಹಗರಣದಲ್ಲಿ ಸಿಲುಕಿಕೊಂಡಿದ್ದರೂ, ಡಿ.ಬಿ.ಚಂದ್ರೇಗೌಡ ಮತ್ತು ಬಚ್ಚೇಗೌಡರನ್ನು ಮುಂದಿಟ್ಟುಕೊಂಡು ಬೇರೊಬ್ಬರ ಮೇಲೆ ಆರೋಪ ಮಾಡುವ ಅಗತ್ಯವಿಲ್ಲ. ಇದೀಗ ಒಂದೊಂದಾಗಿಯೇ ಹೊರಬರುತ್ತಿರುವ ಭೂ ಹಗರಣಗಳ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದರು.
ಭೂ ಹಗರಣಗಳು ಹೊರಬರುತ್ತಿರುವಂತೆಯೇ ಹೇಳಿಕೆ ನೀಡಲು ಆರಂಭಿಸಿರುವ ಡಿ.ಬಿ. ಸತ್ಯವಂತರೋ?ಭೂ ಹಗರಣದಲ್ಲಿ ಅವರು ಎಷ್ಟು ನಿವೇಶನಗಳನ್ನು ಮಾಡಿಕೊಂಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದರು.
ಎಲ್ಲಾ ಹಗರಣಗಳನ್ನು ಮಾಡಿದ ಮೇಲೆ ಯಡಿಯೂರಪ್ಪ ತನಿಖೆಗೆ ಲೋಕಾಯುಕ್ತರಿಗೆ ನೀಡುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದರೆ ಅವರನ್ನು ಸೇರಿದಂತೆ ಲೋಕಾಯುಕ್ತ ತನಿಖೆಗೆ ವಹಿಸಲಿ ನೋಡೋಣ ಎಂದು ಸವಾಲು ಹಾಕಿದರು.