ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಬದ್ಧವಾಗಿದ್ದು, ಈ ಮೂಲಕ ಗುಲ್ಬರ್ಗದಲ್ಲಿ ಮೂರನೇ ಬಾರಿ ಸಚಿವ ಸಂಪುಟ ಸಭೆ ನಡೆಸಲು ಮುಂದಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುಲ್ಬರ್ಗದಲ್ಲಿ ಸೋಮವಾರ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ನಾನಾ ಕೆಲಸ ಪರಿಶೀಲನೆ ನಡೆಸಿದ ಸಚಿವ ಬೊಮ್ಮಾಯಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಗುಲ್ಬರ್ಗಕ್ಕೆ ಆಗಮಿಸಿರುವ ಈ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ವಿಭಾಗ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಹಲವು, ಹತ್ತು ನಿರ್ಣಯ ಕೈಗೊಳ್ಳಲಿದ್ದಾರೆ.
ಸ್ವಾತಂತ್ರ್ಯ ನಂತರ ಗುಲ್ಬರ್ಗ ಪ್ರದೇಶದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಈ ಹಿಂದುಳಿದ ಭಾಗದ ಒಟ್ಟಾರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ನಿಟ್ಟಿನಲ್ಲಿ ಎದುರಾಗುವ ಸವಾಲು ಎದುರಿಸಲು ಬಿಜೆಪಿ ಸರಕಾರ ಸಿದ್ಧವಿದೆ.
ಗುಲ್ಬರ್ಗ ನಗರದ ಗೊಲ್ಲರವಾಡಿ ಪ್ರದೇಶದಲ್ಲಿ ಭಾಗ್ಯ ಸಂಪದ ಯಶಸ್ಸು (ಬಿಎಸ್ವೈ) ಎಂಬ ಹೌಸಿಂಗ್ ಬೋರ್ಡ್ ಯೋಜನೆ ಅಡಿ ಬಹು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಫಲಾನುಭವಿಗಳ ಪಾಲು ಶೇ.10, ಉಳಿದದ್ದು ಸಾಲ ಯೋಜನೆ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು. ಈ ಕಟ್ಟಡದಲ್ಲಿ ಸುಮಾರು 150-180 ಮನೆಗಳು ನಿರ್ಮಾಣವಾಗಲಿವೆ. 3.95 ಲಕ್ಷ ರೂ, 4.25 ಲಕ್ಷ ಹಾಗೂ 5.25 ಲಕ್ಷ ರೂ. ಪ್ರತಿ ಮನೆ ದರ ನಿಗದಿಯಾಗಿದೆ ಎಂದರು.