ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಧರಣಿ ಕೈಬಿಡಿ-ಶಿಕ್ಷಕರು ಮಾತುಕತೆಗೆ ಬರಲಿ: ಕಾಗೇರಿ (Kageri | BJP | Yeddyurappa | Basavaraj Horattay | Congress)
Bookmark and Share Feedback Print
 
ಶಿಕ್ಷಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ.6ರಂದು ಧರಣಿಗೆ ಮುಂದಾಗಿದ್ದು ಸರಿಯಲ್ಲ. ಮಾತುಕತೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಬಿಜೆಪಿ ಸರಕಾರದ ಕೊಡುಗೆಯಲ್ಲ. ಹಿಂದಿನ ಸರಕಾರಗಳು ಅವುಗಳನ್ನು ಇತ್ಯರ್ಥಗೊಳಿಸಿಲ್ಲ. ಧರಣಿಗೂ ಮುನ್ನ ಮುಖ್ಯಮಂತ್ರಿ ಇಲ್ಲವೇ ತಮ್ಮನ್ನು ಭೇಟಿ ಮಾಡಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಈಗಾಗಲೇ ಹಲವು ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದ ಶ್ರೇಯಸ್ಸು ಬಿಜೆಪಿ ಸರಕಾರದ್ದಾಗಿದೆ. ಆದರೆ, ಈ ಶ್ರೇಯಸ್ಸಿಗೆ ಅಸಮಾಧಾನಗೊಂಡಿರುವ ಬಸವರಾಜ ಹೊರಟ್ಟಿ ಧರಣಿ ಮಾಡಲು ಹೊರಟಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ತಿರುಗೇಟು ನೀಡಿದರು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ನೀಡುತ್ತಿರುವ 400 ಕೋಟಿ ರೂ. ಅನುದಾನವನ್ನು ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂದು ಕಾಗೇರಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

ಈಗಾಗಲೇ ಅನುದಾನ ರಾಜ್ಯಕ್ಕೆ ಬಂದಿದೆ. ಪ್ರತಿ ಪ್ರೌಢಶಾಲೆಗೆ 60 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿರುವ 80ಕ್ಕೂ ಅಧಿಕ ಆದರ್ಶ ಶಾಲೆಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಈ ಹಣ ರಾಜ್ಯದ ಪ್ರತಿ ಪ್ರೌಢಶಾಲೆಗಳ ಸಮಗ್ರ ಅಭಿವೃದ್ದಿಗೆ ಸಾಲುತ್ತಿಲ್ಲ. ಆದ್ದರಿಂದ ಕೇಂದ್ರ ಸರಕಾರ ಈ ಯೋಜನೆಯಡಿ ಸಾವಿರ ಕೋಟಿಗೂ ಅಧಿಕ ಅನುದಾನ ನೀಡುವ ಮೂಲಕ ರಾಜ್ಯದ ಶಿಕ್ಷಣ ಇಲಾಖೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ