ಅಂಗನವಾಡಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಕೇಸರಿಬಾತ್, ಬಿಸಿ ಬೇಳೆಬಾತ್ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಶಾಸಕರು ಸೂಚಿಸಿದ 5 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೆ ತಂದು ಸಾಧಕ ಬಾಧಕ ಗಮನಿಸಿ ಅದನ್ನು ಮುಂದುವರಿಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ ಸರಕಾರ ಹೊಸ ನಿಯಮಗಳನ್ನು ರೂಪಿಸಲಿದೆ. ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಮತ್ತಿತರ ಅರ್ಹತೆಗಳ ಬಗ್ಗೆ ಹೊಸ ನಿಯಮಗಳನ್ನು ರೂಪಿಸಿ ಶೀಘ್ರ ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳ ಹೆಮ್ಮೆಯ ಯೋಜನೆಯಾದ ಭಾಗ್ಯಲಕ್ಷ್ಮಿ ಫಲಾನುಭವಿಗಳ ತಾಯಂದಿರ ಸಮಾವೇಶವನ್ನು ಮೊದಲ ಬಾರಿಗೆ ಅ.14ರಂದು ದಾವಣಗೆರಿಯಲ್ಲಿ ಹಮ್ಮಿಕೊಂಡು ಚಿಣ್ಣರ ಆರೋಗ್ಯ ತಪಾಸಣೆ ಮಾಡಲಾಗುವುದು. ಅ.30ರೊಳಗಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಇಂತಹ ಸಮಾವೇಶಗಳನ್ನು ನಡೆಸಲಾಗುವುದು ಎಂದರು.