ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಕೊಳ್ಳಲು ಸಂಸದ ಚಂದ್ರೇಗೌಡ, ಸಚಿವ ಬಚ್ಚೇಗೌಡರನ್ನು ಬಳಸಿಕೊಂಡಿದ್ದು ದುರದೃಷ್ಟಕರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂಗೆ ಇಂಥ ದುರ್ಗತಿ ಬರಬಾರದಿತ್ತು. ಅವರ ಸ್ಥಿತಿ ನೋಡಿ ಕನಿಕರ ಉಂಟಾಗುತ್ತಿದೆ ಎಂದು ಲೇವಡಿ ಮಾಡಿದರು.
ಚಂದ್ರೇಗೌಡ ಮತ್ತು ಬಚ್ಚೇಗೌಡ ಈ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಮೇಲಿನ ಆರೋಪಗಳು ಕಣ್ಣಿಗೆ ಕಾಣುವ ಸತ್ಯವಾಗಿದ್ದರೂ, ಈ ಇಬ್ಬರು ನಾಯಕರು ಸಮರ್ಥನೆ ನೀಡುತ್ತಿದ್ದಾರೆ. ಹೀಗೆಯೇ ಸಿಎಂ ಪರವಾಗಿ ನಿಂತು ಇನ್ನಷ್ಟು ಸೈಟು ಬರೆಸಿಕೊಳ್ಳುವ ಉದ್ದೇಶವಿರಬಹುದು ಎಂದು ಆರೋಪಿಸಿದರು.
ಕಾನೂನು ಸಚಿವರಾಗಿ ಬಾಬಾ ಬುಡನ್‌ಗಿರಿಯಲ್ಲಿ ಹೋಮ, ಹವನ ಮಾಡಿಸಿದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಚಂದ್ರೇಗೌಡರ ಮೇಲೆ ವಾಗ್ದಾಳಿ ನಡೆಸಿದ ಅವರು, 1972ಕ್ಕೂ ಮೊದಲು ಬಚ್ಚೇಗೌಡರು ಏನಾಗಿದ್ದರು ಎನ್ನುವುದನ್ನು ನೆನಪು ಮಾಡಿಕೊಳ್ಳಲಿ ಎಂದರು.
ಯಡಿಯೂರಪ್ಪ ಮಾಡಿದ ಪಾಪದ ಕೆಲಸಗಳನ್ನು ನಾವು ಮಾಡಿಲ್ಲ. ಅರ್ಧಂಬರ್ಧ ಅನುಭವದಿಂದ ಆಡಳಿತ ನಡೆಸುತ್ತಿರುವ ಅವರು, ಒಂದು ನಿಮಿಷ ಕೂಡ ಸಿಎಂ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕು ಹೊಂದಿಲ್ಲ. ಆದ್ದರಿಂದ ಕೂಡಲೇ ರಾಜೀನಾಮೆ ನೀಡಿ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಅವರ ಬಗ್ಗೆ 'ಈ ಸರಕಾರ ತೊಲಗಲಿ' ಎಂದು ನಾವು ಹೇಳಲಿಲ್ಲ. ಈಗ ಈ ಸರಕಾರ ತೊಲಗಿಸಲು ಹೋರಾಡಬೇಕಾಗಿದೆ. ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿರುವ ಯಡಿಯೂರಪ್ಪ ಸರಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ರಾಜ್ಯಪಾಲರು ಮುಂದಾಗಲಿ ಎಂದು ವ್ಯಂಗ್ಯವಾಡಿದರು.