ಕೆಐಎಡಿಬಿ ಭೂ ಹಗರಣದ ರಾಜಕೀಯ ಕೆಸರೆರಚಾಟ ಮುಂದುವರಿದಿದ್ದು, ತಮ್ಮ ಅವ್ಯವಹಾರವನ್ನು ಮುಚ್ಚಿಹಾಕಲು ವಿಶೇಷ ಅಧಿವೇಶನ ಕರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಗೋಮುಖ ವ್ಯಾಘ್ರತನವನ್ನು ಮಾಧ್ಯಮಗಳ ಮುಂದೆ ಬಯಲುಮಾಡಿಕೊಂಡಿದ್ದಾರೆ. ಅಲ್ಲದೆ ಹಗರಣಗಳ ಬಗ್ಗೆ ಅಧಿವೇಶನದ ಬದಲು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಭೂ ಹಗರಣ ಕುರಿತಂತೆ ವಿಶೇಷ ಅಧಿವೇಶನ ಕರೆಯುತ್ತೇನೆ. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಠಾಧೀಶರು, ನಾಡಿನ ಹಿರಿಯ ಸಾಹಿತಿಗಳು, ಬುದ್ದಿಜೀವಿಗಳಿಗೂ ಆಹ್ವಾನ ನೀಡುವುದಾಗಿ ವಿನಮ್ರತೆಯಿಂದ ಭಾನುವಾರ ಮಾಧ್ಯಮಗಳ ಮುಂದೆ ಯಡಿಯೂರಪ್ಪ ವಿನಂತಿ ಮಾಡಿಕೊಂಡಿದ್ದಾರೆ. ನನ್ನ ಕಾಲದಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ನಾನು ಯಾವುದೇ ತನಿಖೆಗೂ ಸಿದ್ದ, ಹಾಗಾಗಿ ವಿಶೇಷ ಅಧಿವೇಶನ ಬೇಡ, ಬಹಿರಂಗವಾಗಿ ಅಖಾಡಕ್ಕೆ ಬನ್ನಿ ಎಂದು ಯಡಿಯೂರಪ್ಪ ಅವರಿಗೆ ಬಹಿರಂಗ ಪಂಥಾಹ್ವಾನ ನೀಡಿದ್ದಾರೆ.
ದಯವಿಟ್ಟು ಪವಿತ್ರವಾದ ಮಠಾಧೀಶರಿಗೆ ಆಹ್ವಾನ ನೀಡಬೇಡಿ. ಈ ಮೊದಲು ಚೀನಾ ಪ್ರವಾಸಕ್ಕೆ ಹೋಗಿ ಬಂದ ನಂತರ ಕೂಡ ತಾನು ರೈತರಿಗಾಗಿ, ಕೃಷಿ ಅಭಿವೃದ್ಧಿಗಾಗಿ ವಿಶೇಷ ಅಧಿವೇಶನ ಕರೆಯುವುದಾಗಿ ಹೇಳಿದ್ದರು. ಬಳಿಕ ನೈಸ್ ವಿವಾದದ ಸಂದರ್ಭದಲ್ಲಿಯೂ ವಿಶೇಷ ಅಧಿವೇಶನ ಕರೆಯುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದರು. ಈಗಲೂ ಯಡಿಯೂರಪ್ಪ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿಶೇಷ ಅಧಿವೇಶನ ನಡೆಸುವ ಪೊಳ್ಳು ಭರವಸೆ ನೀಡಿದ್ದಾರೆ. ಇದು ಅವರ ಗೋಮುಖ ವ್ಯಾಘ್ರತನವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ ಭೂಹಗರಣದ ಕುರಿತು ಒಂದು ಕಾಲದಲ್ಲಿ ನಿರಾಶ್ರಿತರಾಗಿದ್ದವರಿಗೆ ಆಶ್ರಯ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪನವರ ಋಣ ತೀರಿಸಲು ಸಂಸದ ಡಿ.ಬಿ.ಚಂದ್ರೇಗೌಡ, ಸಚಿವ ಬಚ್ಚೇಗೌಡ ಮುಂದಾಗಿದ್ದಾರೆ. ಹಗರಣದ ಕುರಿತು ಸಮಜಾಯಿಷಿ ನೀಡುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಇವರಿಗೆ ಯಾವ ಅಧಿಕಾರ ಇದೆ? ಚಂದ್ರೇಗೌಡರ ಪತ್ರಿಕಾಗೋಷ್ಠಿಯಲ್ಲಿ ಬಿಡಿಎ, ನಗರಾಭಿವೃದ್ಧಿ, ಕಂದಾಯ, ಕಾನೂನು ಇಲಾಖೆಯ ಸಚಿವರು, ಅಧಿಕಾರಿಗಳು ಇದ್ದಾರೆಯೇ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಭೂಹಗರಣ ಮಾಡಿದ್ದಾರೆಂದು ಆರೋಪಿಸುತ್ತಾರಲ್ಲ. ಇವರಿಗೆ ಏನಾದರು ಸ್ಪಷ್ಟ ಮಾಹಿತಿ ಇದೆಯೇ? ಯಾವುದೇ ಟೀಕೆ ಮಾಡುವ ಮೊದಲು ಅದರ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಒಳ್ಳೆಯದಲ್ಲ.
ಅಷ್ಟೇ ಅಲ್ಲ ನನ್ನ ಕಾಲಾವಧಿಯಲ್ಲಿ 275 ಎಕರೆ ಭೂಮಿ ಡಿನೋಟಿಫೈಗೆ ಸಹಿ ಹಾಕಿದ್ದೇನೆ ಎಂದು ಬೊಂಬಡ ಹೊಡೆಯುತ್ತಿರುವ ಬಿಜೆಪಿ ಮುಖಂಡರಿಗೆ ಏನು ಹೇಳಬೇಕು ಎಂಬ ಜ್ಞಾನವೂ ಇಲ್ಲ. ಯಾಕೆಂದರೆ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂಸ್ವಾಧೀನಕ್ಕೆ ಸಹಿ ಹಾಕಿದ್ದರು. ಅಲ್ಲದೆ ನನ್ನ ಕಾಲಾವಧಿಯಲ್ಲಿ ಎಷ್ಟು ಎಕರೆ ಜಮೀನು ಡಿನೋಟಿಫಿಕೇಷನ್‌ಗೆ ಸಹಿ ಹಾಕಿದ್ದೇನೆ ಎಂಬ ಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು, ನಾಲ್ಕೈದು ದಿನಗಳಲ್ಲಿಯೇ ಮಾಧ್ಯಮಕ್ಕೆ ವಿವರ ನೀಡುವುದಾಗಿ ಹೇಳಿದರು.