ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ನಿರಂತರ ವಿದ್ಯುತ್ ಜ್ಯೋತಿ ಯೋಜನೆ ಜಾರಿಗೆ 2,123 ಕೋಟಿ ರೂ.ವೆಚ್ಚ, 13 ಜಿಲ್ಲೆಗಳಲ್ಲಿ 30 ಕುಡಿಯುವ ನೀರು ಯೋಜನೆಗೆ 553 ಕೋಟಿ ರೂ., ಭಾಗ್ಯಲಕ್ಷ್ಮಿ ಯೋಜನೆಯ ತಾಯಿಯಂದಿರಿಗೆ 26 ಕೋಟಿ ರೂ.ವೆಚ್ಚದಲ್ಲಿ ಸೀರೆ ವಿತರಣೆ ಸೇರಿದಂತೆ ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಜನತೆಗೆ ಒಟ್ಟು 4,632.80 ಕೋಟಿ ರೂಪಾಯಿಗಳ ಭರ್ಜರಿ ಆಶ್ವಾಸನೆ ಘೋಷಿಸಲಾಗಿದೆ.
ಇದು ಸೋಮವಾರ ಗುಲ್ಬರ್ಗ ಮಿನಿವಿಧಾನಸೌಧದಲ್ಲಿ ಬಿಜೆಪಿ ಸರಕಾರ ನಡೆಸಿದ 3ನೆ ಸಚಿವ ಸಂಪುಟದ ಮಹತ್ವದ ನಿರ್ಧಾರಗಳು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 55 ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು ಎಂದು ಸಭೆಯ ಅಂತ್ಯಗೊಂಡ ನಂತರ ಸಿಎಂ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಮತ್ತು ಮೂಲ ಸೌಲಭ್ಯ ಹೆಚ್ಚಳ ಮಾಡಲು 20 ಕೋಟಿ ರೂ.ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆ ಮಾಡಲು 37ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಗುಲ್ಬರ್ಗಾದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ 2,440 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದು, 81 ಕೋಟಿ ರೂ.ಹಣವನ್ನು ಮೊದಲ ಕಂತಾಗಿ ನೀಡಲಾಗುವುದು ಎಂದು ತಿಳಿಸಿದರು.
ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ 15 ಕೋಟಿ ರೂ.ಸಾಲಕ್ಕೆ ಬ್ಯಾಂಕ್ ಗ್ಯಾರಂಟಿ ನೀಡಲು ಸಚಿವ ಸಂಪುಟದ ಒಪ್ಪಿಗೆ, ಗುಲ್ಬರ್ಗದಲ್ಲಿ ಹಾಲು ಶಿಥಿಲೀಕರಣ ಕೇಂದ್ರಕ್ಕೆ ಹತ್ತು ಕೋಟಿ ರೂ.ವೆಚ್ಚಮಾಡಲು ಆಡಳಿತಾತ್ಮಕ ಒಪ್ಪಿಗೆ ಪಡೆಯಲಾಯಿತು. ನಿರಂತರ ವಿದ್ಯುತ್ ಜ್ಯೋತಿ ಯೋಜನೆಯನ್ನು ಈಗ ರಾಜ್ಯದ ಆರು ತಾಲೂಕುಗಳಲ್ಲಿ ಜಾರಿಗೆ ತಂದಿದ್ದು, ಇದನ್ನು ಎಲ್ಲಾ ತಾಲೂಕುಗಳಲ್ಲಿ ಅಳವಡಿಸಿಕೊಳ್ಳಲು ತೀರ್ಮಾನ ಮಾಡಲಾಗಿದ್ದು, ಇದಕ್ಕೆ 2,123 ಕೋಟಿ ರೂ.ವೆಚ್ಚ ಬರಲಿದ್ದು, ಅದಕ್ಕಾಗಿ ಎಲ್ಲಾ ಎಸ್ಕಾಂಗಳು 500 ಕೋಟಿ ರೂ.ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.