ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಲ್ಲದೆ, ನ್ಯಾಯಮೂರ್ತಿಗಳು ನೀಡಿರುವ ಎಚ್ಚರಿಕೆ ಮಾತನ್ನೂ ಕಡೆಗಣಿಸಿದ ತಪ್ಪಿಗೆ ವ್ಯಕ್ತಿಯೊಬ್ಬರನ್ನು ನೇರ ಜೈಲಿಗೆ ಕಳುಹಿಸಿದ ಅಪರೂಪದ ಘಟನೆಯೊಂದು ಕೋರ್ಟ್‌ನಲ್ಲಿ ಸೋಮವಾರ ನಡೆಯಿತು.
ನಗರದ ಯಶವಂತಪುರ ಸಮೀಪದ ನಿವಾಸಿ ಎಸ್.ಎಂ.ಬಸವರಾಜು ಈಗ ಜೈಲುವಾಸ ಅನುಭವಿಸುತ್ತಿರುವ ವ್ಯಕ್ತಿ. ಇಲ್ಲಿಯ ಗೋಕುಲ ಒಂದನೇ ಹಂತದ ಬಳಿಯ ಮಳಿಗೆಯೊಂದಕ್ಕೆ ಸಂಬಂಧಿಸಿದ ವಿವಾದ ಇದಾಗಿದ್ದು, ಈ ಮಳಿಗೆಯನ್ನು ಬಸವರಾಜು ಅವರು ಮುನಿಕೃಷ್ಣ ಎನ್ನುವವರಿಗೆ ಮಾರಾಟ ಮಾಡಿದ್ದರು. ಆದರೂ ಸಿವಿಲ್ ಕೋರ್ಟ್ ದಾರಿ ತಪ್ಪಿಸಿದ್ದ ಅವರು, ಮುನಿಕೃಷ್ಣ ಅವರನ್ನು ಮಳಿಗೆಯಿಂದ ತೆರವುಗೊಳಿಸುವ ಆದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ಬಗ್ಗೆ ಮುನಿಕೃಷ್ಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಹಿಂದೆ ಇದರ ವಿಚಾರಣೆ ನಡೆದಾಗ ನ್ಯಾಯಮೂರ್ತಿಗಳು ಕೂಡಲೇ ಮಳಿಗೆ ತೆರವುಗೊಳಿಸುವಂತೆ ಅವರಿಗೆ ಆದೇಶಿಸಿದ್ದರು. ಆದರೂ ಈ ಆದೇಶವನ್ನು ಅವರು ಪಾಲನೆ ಮಾಡಿರಲಿಲ್ಲವಾಗಿತ್ತು. ಸೋಮವಾರದ ವಿಚಾರಣೆ ವೇಳೆ, ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಕೂಡಲೇ ಮಳಿಗೆ ತೆರವುಗೊಳಿಸಲು ಆದೇಶಿಸಿತು.
ಆದೇಶ ಪಾಲನೆ ಮಾಡದಿದ್ದರೆ ಜೈಲಿಗೆ ಹಾಕುವುದಾಗಿಯೂ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದರು. ಆದರೆ ಮಳಿಗೆ ತೆರವಿಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದು ಪದೇ, ಪದೇ ಬಸವರಾಜು ಹೇಳಿದಾಗ, ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ಅವರನ್ನು ಕೂಡಲೇ ಜೈಲಿಗೆ ಕಳುಹಿಸುವಂತೆ ರಿಜಿಸ್ಟ್ರಾರ್ ಅವರಿಗೆ ಸೂಚಿಸಿತು. ಅಂತೂ ವಿಚಾರಣೆ ಬಂದು, ಗೋಗರೆದು ಜೈಲಿಗೆ ಹೋದ ಬಸವರಾಜು ಮಳಿಗೆ ತೆರವುಮಾಡದೆ ಬಿಡುಗಡೆ ಇಲ್ಲದಂತಹ ಪರಿಸ್ಥಿತಿ ಆಗಿದೆ!