ಕೆಐಎಡಿಬಿ ಮತ್ತು ಭೂಹಗರಣದ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಳ್ಳುವ ಮೂಲಕ ಸರಕಾರ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ.
ರಾಜ್ಯರಾಜಕಾರಣದಲ್ಲಿನ ದಿಢೀರ್ ಬೆಳವಣಿಗೆ ಎಂಬಂತೆ ಸೋಮವಾರ ರಾತ್ರಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸುಮಾರು 20ಕ್ಕೂ ಅಧಿಕ ಶಾಸಕರು ಕರ್ನಾಟಕದ ಗಡಿಯಾಚೆಯ ಹೊಸೂರು ರೆಸಾರ್ಟ್‌ವೊಂದರಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ.
ಬಂಡಾಯ ಎದ್ದಿರುವ ಶಾಸಕರು ಪಕ್ಷದಲ್ಲಿ ಇತ್ತೀಚೆಗಿನ ಕೆಐಎಡಿಬಿ ಹಗರಣ, ಮುಖ್ಯಮಂತ್ರಿ ಹಾಗೂ ಪುತ್ರರ ಭೂಹಗರಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಪುತ್ರ, ಪತ್ನಿಯ ಹಗರಣದಿಂದ ಆಂತರಿಕವಾಗಿ ರೋಸಿ ಹೋಗಿರುವ ಕೆಲವು ಶಾಸಕರು ಇದೀಗ ಸಿಕ್ಕಿದ್ದೆ ಸಂದರ್ಭ ಎಂದು ತಿಳಿದು ಮತ್ತೆ ಯಡಿಯೂರಪ್ಪ ವಿರುದ್ಧ ಬಂಡಾಯ ಸಾರಿದ್ದಾರೆ.
ಮತ್ತೊಂದೆಡೆ ಇತ್ತೀಚೆಗಷ್ಟೇ ಸಂಸದ ಅನಂತ್ ಕುಮಾರ್ ಸೇರಿದಂತೆ ಹಲವರ ವಿರೋಧದ ನಡುವೆಯೂ ಸಚಿವ ಸಂಪುಟ ಪುನಾರಚನೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಇಷ್ಟು ದಿನ ರಾಜ್ಯರಾಜಕಾರಣದಲ್ಲಿ ಬಳ್ಳಾರಿ ರೆಡ್ಡಿ ಸಹೋದರರ ಅಕ್ರಮಗಣಿಗಾರಿಕೆಯೇ ಸದ್ದು ಮಾಡುತ್ತಿತ್ತು. ಆದರೆ ಈಗ ಕೆಐಎಡಿಬಿ, ಭೂಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳು ಮತ್ತು ಪುತ್ರರ ಹೆಸರು, ನಾಯ್ಡು ಮತ್ತು ಪುತ್ರನ ಮೇಲಿನ ಆರೋಪಗಳು ಬಲವಾಗುತ್ತಿರುವುದು ರೆಡ್ಡಿ ಪಾಳಯಕ್ಕೆ ಆನೆ ಬಲ ಬಂದಂತಾಗಿದೆ. ತಾನು ಮುಖ್ಯಮಂತ್ರಿಗಳ ಮಾನಸ ಪುತ್ರ ಎಂದೇ ಹೇಳುತ್ತಿದ್ದ ರೇಣುಕಾಚಾರ್ಯ ಮತ್ತೆ ಯಡಿಯೂರಪ್ಪನವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ!
ಬಿಜೆಪಿಯಲ್ಲಿನ ಅನೇಕ ಅತೃಪ್ತ ಶಾಸಕರು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ಸಂಪರ್ಕದಲ್ಲಿರುವುದು ಕೂಡ ಗುಟ್ಟಾಗಿ ಉಳಿದ ವಿಚಾರವೇನಾಗಿರಲಿಲ್ಲ. ಆ ನೆಲೆಯಲ್ಲಿ ಕಳೆದ ರಾತ್ರಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಸುಮಾರು 23 ಮಂದಿ ಶಾಸಕರು ಮತ್ತೆ ಸಿಎಂ ವಿರುದ್ಧ ಬಂಡಾಯದ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಅಧಿಕಾರದ ಗದ್ದುಗೆ ಏರಿದ ದಿನದಿಂದ ಹಲವು ಅಗ್ನಿ ಪರೀಕ್ಷೆ ಎದುರಿಸಿದ್ದೇನೆ. ಅವುಗಳಲ್ಲಿ ಗೆಲುವು ಕೂಡ ಸಾಧಿಸುವ ವಿಶ್ವಾಸ ಇರುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೊಂದು ದೊಡ್ಡ ಕಂಟಕ ಎದುರಾಗುವ ಮೂಲಕ ರಾಜ್ಯರಾಜಕಾರಣ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮೊಬೈಲ್ ಸ್ವಿಚ್ ಆಫ್...ನಾಟ್ ರಿಚೇಬಲ್: ಶಾಸಕ ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ಸಾರ್ವಭೌಮ ಬಗಲಿ, ಗೂಳಿಹಟ್ಟಿ ಶೇಖರ್, ಬೇಳೂರು ಗೋಪಾಲಕೃಷ್ಣ, ವೆಂಕಟರಮಣಪ್ಪ, ಡಿ.ಸುಧಾಕರ್, ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ, ನಾಗರಾಜ್, ವೈ.ಸಂಪಂಗಿ, , ಬಿ.ಪಿ.ಹರೀಶ್, ನಂಜುಂಡಸ್ವಾಮಿ ಸೇರಿದಂತೆ 20 ಮಂದಿ ಶಾಸಕರು ಹಾಗೂ ಏಳು ಮಂದಿ ಸಚಿವರು ಸರಕಾರದ ವಿರುದ್ಧ ತಿರುಗಿಬಿದ್ದಿದ್ದು ರೇಣುಕಾಚಾರ್ಯ ನೇತೃತ್ವದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಬಂಡಾಯವೆದ್ದಿರುವ ಶಾಸಕರನ್ನು ಸಂಪರ್ಕಿಸಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನಿಸಿದರಾದರೂ ಕೂಡ ಮೊಬೈಲ್ ಸ್ವಿಚ್ ಆಫ್ ಆಗಿದೆ, ನಾಟ್ ರಿಚೇಬಲ್ ಎಂಬ ಧ್ವನಿ ಕೇಳಿಬರುತ್ತಿದೆ!