ರಾಜ್ಯದ ಹದಿನಾರು ಕೊಳೆಗೇರಿಗಳಲ್ಲಿ ಮೂಲಸೌಲಭ್ಯ ಒಳಗೊಂಡ ಸುಸಜ್ಜಿತ ಮನೆ ನಿರ್ಮಾಣಕ್ಕೆ ಬಿಎಸ್‌ವೈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸ್ಥಳೀಯ ಗೊಲ್ಲರ ಕಾಲೋನಿಯ ಬಿಎಸ್‌ವೈ ವಸತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಒಂದು ವರ್ಷದ ಒಳಗಾಗಿ ನಗರದಲ್ಲಿ 160 ಮನೆ ನಿರ್ಮಿಸಲಾಗುವುದು. ಒಂದೆರಡು ತಿಂಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ಮನೆ ಸಂಕೀರ್ಣ ಶೌಚಾಲಯ, ಸ್ನಾನಗೃಹ, ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುತ್ತದೆ ಎಂದು ವಿವರಿಸಿದರು.
ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೊಳಚೆ ಪ್ರದೇಶ ತಲೆಎತ್ತದಂತೆ ನೋಡಿಕೊಳ್ಳಲಾಗುವುದು. ಈಗಿರುವ ಕೊಳೆಗೇರಿ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಸಿಎಫ್ಎಲ್ ಬಲ್ಬ್ ವಿತರಣೆ ಮಾಡಿದರು. ಜಲಸಂಪನ್ಮೂಲ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗುಲ್ಬರ್ಗ ಅಭಿವೃದ್ಧಿಗೆ ಈ ಮೊದಲು 100 ಕೋಟಿ ರೂ. ನೀಡಲಾಗಿದ್ದು, ಈ ವರ್ಷ ಮತ್ತೆ 100 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಈಗಾಗಲೇ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.