ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಸ್ವಲ್ಪವಾದರೂ ಮಾನ, ಮರ್ಯಾದೆ ಇರುವುದಾದರೆ ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಕೊಡಲಿ. ಒಂದು ವೇಳೆ ನಾನು ಅಥವಾ ನನ್ನ ಕುಟುಂಬ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಸಾಬೀತಾದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಅವರು ಕೊಡುವ ಯಾವ ಶಿಕ್ಷೆ ಎದುರಿಸಲು ಕೂಡಾ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸವಾಲು ಹಾಕಿದರು.
ನಾನು ಷೇರು ಮಾರುಕಟ್ಟೆಯಲ್ಲಿ ಎರಡು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದೇನೆ. ಸಾವಿರಾರು ಕೋಟಿ ರೂ. ಅಕ್ರಮ ಆಸ್ತಿ, ಮಾಡಿದ್ದೇನೆ ಎಂದೆಲ್ಲಾ ಅವರು ಆರೋಪ ಮಾಡಿದ್ದಾರೆ. ನನ್ನಲ್ಲಿ ಹಣ, ಆಸ್ತಿ ಇದೆ. ದೇಶದಲ್ಲಿ ಶ್ರೀಮಂತರಾಗುವುದು ತಪ್ಪಲ್ಲ, ಆದರೆ, ಸರಕಾರಿ, ಗೋಮಾಳ ಅಥವಾ ಡಿನೋಟಿಫೈ ಮಾಡಿದ ಜಾಗ ಒಳಗೆ ಹಾಕಿ ಮಾಡಿದ ಆಸ್ತಿ ಅಲ್ಲ ಎಂಬುದು ನೆನಪಿನಲ್ಲಿರಲಿ. ಕಟ್ಟಾಗೆ ಆರೋಪ ಸಾಬೀತು ಮಾಡಲಾಗದಿದ್ದರೆ ಬಹಿರಂಗವಾಗಿ ಸಾರ್ವಜನಿಕರ ಕ್ಷಮೆ ಕೇಳಲಿ.
ನನ್ನ 40 ವರ್ಷದ ಸಾರ್ವಜನಿಕ ಜೀವನದಲ್ಲಿ ಯಾರ ಚಾರಿತ್ರ್ಯ ಹರಣ ಮಾಡಿಲ್ಲ. ಕಟ್ಟಾ ಪುತ್ರ ಲೋಕಾಯುಕ್ತ ಬಲೆಗೆ ಸಿಕ್ಕಿ ಹಾಕಿರುವುದು, ಕುಟುಂಬವೇ ಅಕ್ರಮದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ. ಪ್ರತಿಪಕ್ಷದ ಮುಖಂಡನಾಗಿ ಅದರ ಬಗ್ಗೆ ಚರ್ಚೆ ಮಾಡದಿದ್ದರೆ ಕರ್ತವ್ಯ ಚ್ಯುತಿಯಾಗುತ್ತದೆ. ಜನರು ಕೂಡಾ ಸುಮ್ನೆ ಬಿಡಲಾರರು. ತನ್ನ ವಿರುದ್ಧದ ಆರೋಪ ಮುಚ್ಚಿಹಾಕುವ ಹತಾಶ ಭಾವನೆಯಿಂದ ಅವರು ನಾಲಗೆ ಚಪಲ ತೀರಿಸಿಕೊಳ್ಳುವ ಬದಲು ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದರು.
ನಿಮ್ಮ ಪಾಪದ ಕೊಡ ತುಂಬಿದ್ದರಿಂದ ಪಾಪ, ಬಿಜೆಪಿಯವರು ಕೂಡಾ ನಿಮ್ಮ ಸಹಾಯಕ್ಕೆ ಬರುತ್ತಿಲ್ಲ. ಒಂದು ವೇಳೆ ನೀವು ನಿರಪರಾಧಿ ಎಂದಾಗಿದ್ದರೆ, ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಹೊರಗೆ ಬಂದು ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ ಕೊಡಿ. ಒಂದು ವೇಳೆ ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಸಚಿವರಾಗಿ. ನಿಮ್ಮನ್ನು ಯಾರೂ ತಡೆಯುವುದಿಲ್ಲ. ನಿಮ್ಮ ಮಾನ ಹರಾಜಾದಂತೆ ಪ್ರಾಮಾಣಿಕತೆ ಕೂಡಾ ಪ್ರದರ್ಶನವಾಗಲಿ ಎಂದು ದೇಶಪಾಂಡೆ ಸಲಹೆ ನೀಡಿದ್ದಾರೆ.