ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಮತ್ತು ಪಾಂಡಿಚೇರಿ ಉತ್ತಮ ಆರೋಗ್ಯ ಸೂಚ್ಯಂಕವನ್ನು ಹೊಂದಿದೆ. ದೇಶದ 250 ಜಿಲ್ಲೆಗಳಲ್ಲಿ ಆರೋಗ್ಯ ಸುರಕ್ಷಾ ಸೂಚ್ಯಂಕ ತೀರಾ ಕೆಳಮಟ್ಟದಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ಅವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ದಿ. ಕೇಶವ ಭಂಡಾರ್ಕರ್ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ಉದ್ಘಾಟನೆ ಬಳಿಕ ಹೋಟೆಲ್ ಫಾರ್ಚೂನ್ ಇನ್ ವ್ಯಾಲಿವ್ಯೂನ ಚೈತ್ಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ತೆರೆಯುವ ಅಗತ್ಯವಿದ್ದು ಮುಂದಿನ ಎರಡು ವರ್ಷಗಳಲ್ಲಿ 270 ನರ್ಸಿಂಗ್ ಶಾಲೆಗಳನ್ನು 250 ಜಿಲ್ಲೆಗಳಲ್ಲಿ ತೆರೆಯಲು ಆದ್ಯತೆ ನೀಡಲಾಗುವುದು. ಶೇ. 80ರಷ್ಟು ವೈದ್ಯಕೀಯ ಕಾಲೇಜುಗಳು ದಕ್ಷಿಣ ಭಾರತದಲ್ಲಿದ್ದು ಹೆಚ್ಚುವರಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯಿದ್ದಾರೆ. ಶೇ. 90 ನರ್ಸಿಂಗ್ ಕಾಲೇಜುಗಳೂ ದಕ್ಷಿಣದಲ್ಲಿವೆ ಎಂದರು.
ಗರ್ಭಿಣಿ, ತಾಯಿ-ಮಗುವಿನಲ್ಲಿ ರಕ್ತ ಹೀನತೆ ಬಹುದೊಡ್ಡ ಸಮಸ್ಯೆಯಾಗಿದೆ. ಗರ್ಭಿಣಿ ಆರೈಕೆ, ಮಗುವಿಗೆ ಚುಚ್ಚುಮದ್ದು, ಸಾಂಸ್ಥಿಕ ಹೆರಿಗೆಗೆ ಆದ್ಯತೆ ನೀಡಲಾಗಿದೆ. ಜನನಿ ಸುರಕ್ಷಾ ಯೋಜನೆಯಡಿ 2009-10ರಲ್ಲಿ ಒಂದು ಕೋಟಿ ಗರ್ಭಿಣಿಯರಿಗೆ 1,400 ಕೋಟಿ ರೂ. ವಿನಿಯೋಗಿಸಲಾಗಿದೆ. ಎರಡು ವರ್ಷಗಳಲ್ಲಿ ಸ್ನಾತಕೋತ್ತರ ಪದವಿ ಸೀಟನ್ನು 10-12 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.