ತಪ್ಪು ಸಾಬೀತಾದ್ರೆ ಜಮೀನು ಬಡವರಿಗೆ ಹಂಚುತ್ತೇನೆ: ರಾಘವೇಂದ್ರ
ಶಿವಮೊಗ್ಗ, ಮಂಗಳವಾರ, 5 ಅಕ್ಟೋಬರ್ 2010( 15:21 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಥವಾ ತಾನಾಗಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿರುವುದನ್ನು ದಾಖಲೆಗಳ ಸಮೇತ ಸಾಬೀತುಪಡಿಸಿದಲ್ಲಿ ಅಂತಹ ಆಸ್ತಿಯನ್ನು ಬಡವರಿಗೆ ಹಂಚಿಕೆ ಮಾಡಲು ಸಿದ್ಧ ಎಂದು ಸಂಸದ ಬಿ.ವೈ.ರಾಘವೇಂದ್ರ ಬಹಿರಂಗವಾಗಿ ಘೋಷಿಸಿದ್ದಾರೆ.
ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಿ.ಆರ್.ಪಿ.ಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಆರೋಪ ಮಾಡುವುದು ಸರಿಯಲ್ಲ. ತಮ್ಮ ತಂದೆ ಯಡಿಯೂರಪ್ಪ ಅಥವಾ ತಾನಾಗಲಿ ಅಕ್ರಮ ಆಸ್ತಿ ಸಂಪಾದಿಸಿಲ್ಲ ಅಥವಾ ಖರೀದಿ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿಯಾದ ಬಂಗಾರಪ್ಪ ಅವರು ಸರಿಯಾದ ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕು ಎಂದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಾಧನೆ ಸಹಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ತಮ್ಮ ತಪ್ಪುಗಳ ಬಗ್ಗೆ ಆವಲೋಕನ ಮಾಡುವುದು ಬಿಟ್ಟು ಸರಕಾರ ಮತ್ತು ಆಡಳಿತ ಪಕ್ಷದವರ ಮೇಲೆ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.