ಯಾವ ಸರಕಾರದ ಯಾರ ಅಧಿಕಾರಾವಧಿಯಲ್ಲಿ ಎಷ್ಟು ಭೂಮಿ ಡಿನೋಟಿಫೈ ಆಗಿದೆ ಎಂಬುದನ್ನು ಲೋಕಾಯುಕ್ತರು ತನಿಖೆ ನಡೆಸಿ ಸತ್ಯಾಂಶ ಬಹಿರಂಗ ಪಡಿಸಬೇಕೆಂದು ರಾಜ್ಯ ರೈತಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ರಾಜೀನಾಮೆ ಪಡೆದು ಡಿನೋಟಿಫೈ ಹಗರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಡಿನೋಟಿಫೈ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜಾ.ದಳ ಮೂರು ಪಕ್ಷಗಳು ಸಿಲುಕಿವೆ. ಹಗರಣದಲ್ಲಿ ಸಿಲುಕಿರುವ ವ್ಯಕ್ತಿಗಳ ಹೆಸರು ಬಹಿರಂಗವಾದರೆ ಸಾಲದು. ಕಾನೂನುಬದ್ಧ ತನಿಖೆ ಮೂಲಕ ಅವರಿಗೆ ಶಿಕ್ಷೆಯೂ ಆಗಬೇಕು. ಅವರನ್ನು ಮತದಾರರು ಅಧಿಕಾರದಿಂದ ಹೊರ ಹಾಕಬೇಕು ಎಂದರು.
ನಾನು ತಪ್ಪು ಮಾಡಿದ್ದೇನೆ ನಿಜ! ಆದರೆ, ನೀನು-ನೀವು ಮಾಡಿಲ್ಲವೆ ಎಂದು ರಾಜಕಾರಣಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಆ ಮೂಲಕ ತಮ್ಮ ಗೌಪ್ಯತೆಯನ್ನು ತಾವೇ ಹೊರ ಹಾಕುತ್ತಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಿಗೆ ಮಾನ, ಮರ್ಯಾದೆ ಇಲ್ಲವೆ ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿ, ದೇಶಪಾಂಡೆ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳಲಿ. ಕುಮಾರಸ್ವಾಮಿ ಅವರಿಗೆ ಹಾಸನದಲ್ಲಿ ಎಷ್ಟು ಆಸ್ತಿ ಇತ್ತು, ಈಗ ಎಷ್ಟಿದೆ? ಕಟ್ಟಾ ಅವರಿಗೆ ಆಸ್ತಿ ಎಲ್ಲಿಂದ ಬಂತು ಎಂಬುದು ಜನರಿಗೆ ಗೊತ್ತಾಗಬೇಕು ಎಂದರು. ಈ ಹಿಂದೆ ಜಾ.ದಳದಲ್ಲಿದ್ದ ಬಚ್ಚೇಗೌಡ, ಕಾಂಗ್ರೆಸ್‌ನಲ್ಲಿದ್ದ ಚಂದ್ರೇಗೌಡರು ಈಗ ಬಿಜೆಪಿ ಸೇರಿ ಕಾಂಗ್ರೆಸ್ ಮತ್ತು ಜಾ.ದಳದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.