ರಾಜ್ಯರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಭಿನ್ನಮತದ ಕಹಳೆ ಮೊಳಗಿಸಿರುವ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ 20 ಮಂದಿ ಶಾಸಕರು ಕಳೆದ ರಾತ್ರಿ ಹೊಸೂರಿನಲ್ಲಿ ಸಭೆ ನಡೆಸಿದ ನಂತರ ಇದೀಗ ತಮಿಳುನಾಡಿಗೆ ಶಿಫ್ಟ್ ಆಗಿದ್ದಾರೆ. ಆದರೆ ಇದೀಗ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಕೆಲವು ಸಚಿವರು ಸಂಧಾನಕ್ಕಾಗಿ ಚೆನ್ನೈಗೆ ಆಗಮಿಸಿದ್ದಾರೆ.
ತಮಿಳುನಾಡಿನಲ್ಲಿ ಠಿಕಾಣಿ ಹೂಡಿರುವ ಅತೃಪ್ತ ಶಾಸಕರು ಮತ್ತು ಸಚಿವರ ಮನವೊಲಿಸಿ ಕರೆ ತರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಗೃಹ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಸಂಸದ ಸಿದ್ದೇಶ್ ಸೇರಿದಂತೆ ಹಲವರು ವಿಶೇಷ ವಿಮಾನದಲ್ಲಿ ಚೆನ್ನೈಗೆ ಬಂದಿದ್ದಾರೆ.
ತಮಿಳುನಾಡಿನ ಹೊರವಲಯದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿರುವ ಸಚಿವ ರೇಣುಕಾಚಾರ್ಯ ನೇತೃತ್ವದ ಅತೃಪ್ತ ಶಾಸಕರ ಪಡೆ ಯಾವ ಅಸಮಾಧಾನದೊಂದಿಗೆ ಬಂಡಾಯದ ಕಹಳೆ ಮೊಳಗಿಸಿದೆ ಎಂಬುದು ಸ್ಪಷ್ಟವಾಗಿಲ್ಲ. ಪಕ್ಷದಲ್ಲಿನ ಭೂಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಹೆಸರು ಕೇಳಿಬರುತ್ತಿದ್ದು, ಅವರ ರಾಜೀನಾಮೆಯಿಂದ ಒಂದು ವೇಳೆ ಸ್ಥಾನ ತೆರವಾದರೆ ಅದನ್ನು ಶಾಸಕ ಗೋಪಾಲಕೃಷ್ಣ ಬೇಳೂರ್‌ಗೆ ನೀಡಬೇಕೆಂಬ ಬೇಡಿಕೆ ಸೇರಿದಂತೆ ಹಲವು ಉದ್ದೇಶಗಳೊಂದಿಗೆ ಬಂಡಾಯ ಸಾರಿದ್ದಾರೆನ್ನಲಾಗಿದೆ.
ಸಿಎಂ ನಿವಾಸ-ಆರ್ಎಸ್ಎಸ್ ಕಚೇರಿಯಲ್ಲಿ ಬಿರುಸಿನ ಮಾತುಕತೆ: ಆಡಳಿತಾರೂಢ ಬಿಜೆಪಿ ಶಾಸಕರು ಭಿನ್ನಮತದ ಕಹಳೆ ಮೊಳಗಿಸಿರುವ ಮುನ್ಸೂಚನೆ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ಸುರೇಶ್ ಕುಮಾರ್, ಶಾಸಕ ಸಿ.ಟಿ.ರವಿ ಸಿಎಂ ನಿವಾಸದಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಸಿದ್ದರು.
ನಂತರ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿ ಮಾರ್ಗದರ್ಶನ ಪಡೆದರು. ತದನಂತರ ಸಂಜೆ ಮತ್ತೆ ಸಿಎಂ ನಿವಾಸದಲ್ಲಿ ಮಾತುಕತೆ ನಡೆದಿತ್ತು. ಅಂತೂ ಬಂಡಾಯ ಎದ್ದ ಶಾಸಕರ ಮನವೊಲಿಸಿ ಕರೆತರಲು ಸಚಿವ ಶ್ರೀರಾಮುಲು ನೇತೃತ್ವದಲ್ಲಿ ತಂಡವೊಂದನ್ನು ಚೆನ್ನೈಗೆ ಕಳುಹಿಸಿದ್ದಾರೆ.