ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅ.12ರೊಳಗೆ ವಿಶ್ವಾಸಮತ ಸಾಬೀತುಪಡಿಸಿ: ಸಿಎಂಗೆ ಗವರ್ನರ್ (Yeddyurappa, BJP)
Bookmark and Share Feedback Print
 
ಅತೃಪ್ತ ಶಾಸಕರ ಬಂಡಾಯದಿಂದಾಗಿ ರಾಜ್ಯ ಸರಕಾರ ಪತನದ ಅಂಚಿಗೆ ಬಂದು ತಲುಪಿದ್ದರ ಪರಿಣಾಮ ಅಕ್ಟೋಬರ್ 12ರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ 19 ಮಂದಿ ಶಾಸಕರಲ್ಲಿ ಪ್ರಮುಖ ಹೆಸರುಗಳು ಇಂತಿವೆ:
ಎಂ.ಪಿ.ರೇಣುಕಾಚಾರ್ಯ
ಬೇಳೂರು ಗೋಪಾಲಕೃಷ್ಣ
ಬಾಲಚಂದ್ರ ಜಾರಕಿಹೊಳಿ
ವೈ. ಸಂಪಂಗಿ
ಸೌರ್ವಭೌಮ ಬಗಲಿ
ಆನಂದ ಅಸ್ನೋಟಿಕರ್
ನಂಜುಂಡ ಸ್ವಾಮಿ
ಭರಮಗೌಡ
ರಾಜೂ ಕಾಗೆ
ನಾಗರಾಜ್
ದೊಡ್ಡನಗೌಡ
ಎಸ್.ಕೆ.ಬೆಳ್ಳುಬ್ಬಿ
ಶಿವನಗೌಡ ನಾಯಕ್
ಶಂಕರಲಿಂಗೇ ಗೌಡ

ವಾಪಸ್ ಪಡೆದ ಪಕ್ಷೇತರರು:
ನರೇಂದ್ರಸ್ವಾಮಿ
ಶಿವರಾಜ್ ತಂಗಡಗಿ
ವೆಂಕಟರಮಣಪ್ಪ
ಡಿ.ಸುಧಾಕರ್
ವರ್ತೂರು ಪ್ರಕಾಶ್

ಈಗಾಗಲೇ ಬಿಜೆಪಿಯ 19 ಮಂದಿ ಶಾಸಕರು ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿ ಪತ್ರವನ್ನು ನೀಡಿರುವ ಹಿನ್ನೆಲೆಯಲ್ಲಿ ಬಹುಮತವನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿರುವುದಾಗಿ ರಾಜಭವನದ ಮೂಲಗಳು ಬುಧವಾರ ತಿಳಿಸಿವೆ.

ಆಡಳಿತಾರೂಢ ಬಿಜೆಪಿಯಲ್ಲಿ 117 ಶಾಸಕರು, ಪಕ್ಷೇತರರು ಐವರು ಸೇರಿ ಒಟ್ಟು 122 ಸದಸ್ಯ ಬಲ ಹೊಂದಿತ್ತು. ಆದರೆ ರಾಜಕೀಯ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಗಳು ನಾಲ್ಕು ಮಂದಿ ಪಕ್ಷೇತರ ಸಚಿವರನ್ನು ಕೈಬಿಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಶಿಫಾರಸು ಮಾಡಿದ್ದು, ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅಲ್ಲದೆ, ಬಿಜೆಪಿ ಪಕ್ಷದ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿ ಗೆದ್ದ 14 ಮಂದಿ ಹಾಗೂ ಐವರು ಪಕ್ಷೇತರರು ಸೇರಿ 19 ಶಾಸಕರು ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವ ಮೂಲಕ ಆಡಳಿತಾರೂಢ ಬಿಜೆಪಿ ಬಹುಮತ ಕಳೆದುಕೊಂಡಂತಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಅ.12ರ ಸಂಜೆ ಐದು ಗಂಟೆಯೊಳಗೆ ಮ್ಯಾಜಿಕ್ ನಂಬರ್ 113 ಸದಸ್ಯ ಬಲದ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

ರಾಜ್ಯಪಾಲರ ಆದೇಶ ಹೊರಬೀಳುವ ಮುನ್ನ ಸಚಿವ ಸಂಪುಟ ಸಭೆ ನಡೆಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಬಂಡಾಯ ಎದ್ದಿರುವ ಶಾಸಕರು ಬೆಂಬಲ ವಾಪಸ್ ಪತ್ರ ಹಿಂಪಡೆದು ವಾಪಸ್ ಪಕ್ಷಕ್ಕೆ ಬಂದು ಶಾಸಕರಾಗಿ ಮುಂದುವರಿಯಿರಿ ಎಂದು ಎಚ್ಚರಿಕೆ ನೀಡಿದ್ದರು. ಆ ನಿಟ್ಟಿನಲ್ಲಿ ರಾಜ್ಯರಾಜಕಾರಣ ಕುತೂಹಲದ ಘಟ್ಟ ತಲುಪಿದಂತಾಗಿದೆ.

ರಾಜ್ಯಪಾಲರಿಗೆ ಸಲ್ಲಿಸಿದ ಪತ್ರ ವಾಪಸ್ ಪಡೆಯಿರಿ-ಸಿಎಂ ತಾಕೀತು: 'ತಮ್ಮ ಕ್ಷೇತ್ರಗಳಿಗೆ ಮುಖ ತೋರಿಸಬೇಕು ಅಂತಿದ್ದರೆ, ತಕ್ಷಣ ಪಕ್ಷದ ಹೆಸರಿನಲ್ಲಿ ಗೆದ್ದು ಬಂದಿರುವ ಶಾಸಕರು ರಾಜ್ಯಪಾಲರಿಗೆ ನೀಡಿರುವ ಬೆಂಬಲ ವಾಪಸ್ ಪತ್ರವನ್ನು ಹಿಂಪಡೆದು ಶಾಸಕರಾಗಿ ಮುಂದುವರಿಯಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಗ್ಯಾರಂಟಿ'...ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರದ ವಿರುದ್ಧ ಬಂಡಾಯ ಸಾರಿರುವ ಶಾಸಕರಿಗೆ ನೀಡಿರುವ ಕಟು ಎಚ್ಚರಿಕೆಯ ಸಂದೇಶವಾಗಿದೆ.

ಸರಕಾರದ ವಿರುದ್ಧ ಬಂಡೆದ್ದು ಸುಮಾರು 20 ಮಂದಿ ಬಿಜೆಪಿ ಶಾಸಕರು ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ರವಾನಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಿದ್ದರು.

ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾಯಿ ಅರಮನೆಯಲ್ಲಿ ಹುಟ್ಟಲಿ, ಗುಡಿಸಲಿನಲ್ಲಿ ಹುಟ್ಟಲಿ ಅದರ ನಿಷ್ಠೆ ಬದಲಾಗುವುದಿಲ್ಲ' ಆದರೆ ಮನುಷ್ಯ ಮಾತ್ರ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುತ್ತಾನೆ ಎಂದು ಉದಾಹರಣೆಯೊಂದನ್ನು ನೀಡಿದರು. ಹಾಗಾಗಿ ಪಕ್ಷದ ಚಿಹ್ನೆಯಡಿಯಲ್ಲಿ ಗೆದ್ದು ಬಂದಿರುವ ಶಾಸಕರು ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿರುವುದಾಗಿ ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರ ವಾಪಸ್ ಪಡೆದು ಕ್ಷಮೆ ಕೇಳಿ, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ಯಾಕೆಂದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈ ರೀತಿ ಶಾಸಕರು ದಿಢೀರನೆ ಬೆಂಬಲ ವಾಪಸ್ ಪಡೆಯುವುದು ಅಪರಾಧ, ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಹಾಗಿಲ್ಲ ಎಂಬ ಸ್ಪಷ್ಟ ತೀರ್ಪನ್ನು ನೀಡಿದೆ. ನನ್ನ ಮನವಿಯನ್ನೂ ಧಿಕ್ಕರಿಸಿ ಬೆಂಬಲ ಪತ್ರ ವಾಪಸ್ ತಗೊಳ್ಳದಿದ್ದರೆ ಶಿಸ್ತು ಕ್ರಮ ಮುಲಾಜಿಲ್ಲದೆ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ