ರಾಜ್ಯ ಬಿಜೆಪಿ ಸರಕಾರ ಬೀಳಿಸುವ ಪ್ರಯತ್ನ ನಾವೆಂದಿಗೂ ಮಾಡುವುದಿಲ್ಲ. ಅದಾಗೇ ಉರುಳಿ ಬಿದ್ದರೆ ಮಾತ್ರ ಮುಂದಿನ ಹೆಜ್ಜೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯ ಬಿಜೆಪಿ ಸರಕಾರದಲ್ಲಿ ಈ ನಾಟಕ ನಡೆದಿರುವುದು ಮೂರನೇ ಬಾರಿಗೆ. ಹೀಗಾಗಿ ಮುಂಚಿತವಾಗಿ ಏನನ್ನೂ ಹೇಳಲಾಗದು ಎಂದರು. ಈ ಕುರಿತು ಗುಲ್ಬರ್ಗದಲ್ಲಿ ಬುಧವಾರ ಸುದ್ದಿಗಾರರಿಗೆ ಸಚಿವ ಖರ್ಗೆ ಹೇಳಿದ್ದಿಷ್ಟು.
ಕೆಲ ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಮುಂದಾಗಿರಬಹುದು. ಬ್ಲ್ಯಾಕ್‌ಮೇಲ್ ಮಾಡಲು ಈ ತಂತ್ರ ನಡೆಸಿರಬಹುದು. ಅದೇನೆ ಇದ್ದರೂ ನಾವು ಖುದ್ದಾಗಿ ಸರಕಾರ ಉರುಳಿಸುವ ಪ್ರಯತ್ನ ಮಾಡೋದಿಲ್ಲ. ಪ್ರಜಾಸತ್ತಾತ್ಮಕವಾಗಿ ಸರಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಅದು ಯಾವ ಹಂತ ತಲುಪುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆ ನಿಂತಿದೆ. ಸಧ್ಯ ಕಾದು ನೋಡುವ ತಂತ್ರ ನಮ್ಮದು.
ಮನೆ ಬಿದ್ದ ನಂತರವಷ್ಟೇ ಹೊಸ ಮನೆ ಹೇಗಿರಬೇಕೆಂಬ ಬಗ್ಗೆ ಚಿಂತನೆ ನಡೆಯಲಿದೆ. ಆದರೆ ಆ ಮನೆ ತಾನಾಗೇ ಬೀಳಬೇಕು. ಆ ಮನೆ ನಾವು ಕೆಡವಿ ಹೊಸ ಮನೆ ಕಟ್ಟಲು ಹೋಗುವುದಿಲ್ಲ ಎಂಬ ಮಾರ್ಮಿಕ ಉತ್ತರ ಸಚಿವ ಖರ್ಗೆಯವರಿಂದ ವ್ಯಕ್ತವಾಯಿತು.