ದಿನಪೂರ್ತಿ ನಡೆದ ರಾಜಕೀಯ 'ಹೈ ಡ್ರಾಮಾ'ದಲ್ಲಿ ಹೊಸದೊಂದು ತಿರುವು ಮತ್ತು ಬಿಜೆಪಿಗೆ ಒಂದಿಷ್ಟು ನಿರಾಳವಾಗುವ ಸುದ್ದಿ. ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡು, ರಾಜ್ಯಪಾಲರಿಗೆ ಬೆಂಬಲ ಹಿಂತೆಗೆತದ ಪತ್ರ ರವಾನಿಸಿರುವ ಶಾಸಕರಲ್ಲಿ ಇಬ್ಬರು ಶಾಸಕರು ಬಿಜೆಪಿ ಆಪ್ತ ಬಣಕ್ಕೆ ಮರಳಿದ್ದಾರೆ.
ಶಾಸಕರಾದ ದೊಡ್ಡನಗೌಡ ಪಾಟೀಲ ಮತ್ತು ಬಿ.ಪಿ.ಹರೀಶ್ ಅವರು ಬುಧವಾರ ಬೆಳಿಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರನ್ನು ಭೇಟಿಯಾಗಿ, ಬಿಜೆಪಿ ಸರಕಾರಕ್ಕೆ ಬೆಂಬಲ ಹಿಂತೆಗೆತದ ಪತ್ರವನ್ನು ವಾಪಸ್ ಪಡೆದುಕೊಂಡಿದ್ದು, ತಮ್ಮ ಸಹಿಯನ್ನು ಫೋರ್ಜರಿ ಮೂಲಕ ಹಾಕಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ ಮತ್ತು ತಮ್ಮ ನಿಷ್ಠೆ ಬಿಜೆಪಿಗೇ ಎಂದು ತಿಳಿಸಿದ್ದಾರಲ್ಲದೆ, ತಮ್ಮ ಹೆಸರು ಬಂಡಾಯ ಶಾಸಕರ ಪಟ್ಟಿಯಲ್ಲಿದ್ದಾಗ ಅಚ್ಚರಿಯಾಯಿತು ಎಂದರು.
ಕಟ್ಟಾ, ಆಚಾರ್ಯ, ಸುರೇಶ್ ಕುಮಾರ್ ತ್ಯಾಗ... ಇಂದಿನ ಬೆಳವಣಿಗೆಗಳಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಕೂಡ ಭಿನ್ನಮತೀಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜೀನಾಮೆ ಕೊಡಲು ಮುಂದೆ ಬಂದಿದ್ದರೆ, ಬಿಕ್ಕಟ್ಟು ಶಮನಗೊಳಿಸಲು ಬಂಡಾಯಗಾರರಿಗೆ ಮಂತ್ರಿ ಪಟ್ಟ ಬಿಟ್ಟುಕೊಡುವ ಸಂಭಾವ್ಯರ ಪಟ್ಟಿಯಲ್ಲಿ ಸುರೇಶ್ ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿ.ಎಸ್.ಆಚಾರ್ಯ, ರೇವೂ ನಾಯಕ್ ಬೆಳಮಗಿ ಹಾಗೂ ಎಸ್.ಎ.ರವೀಂದ್ರನಾಥ್ ಹೆಸರುಗಳು ಕೇಳಿಬರುತ್ತಿವೆ,
ಇನ್ನೊಂದೆಡೆ, ಬಂಡಾಯ ಶಾಸಕರ ಬಣವನ್ನೇ ಒಡೆದು, 'ಒಡೆದು ಆಳುವ ನೀತಿ'ಯನ್ನೂ ಅನುಸರಿಸುವ ಪ್ರಯತ್ನಗಳು ನಡೆಯುತ್ತಿವೆ. ಭಿನ್ನಮತಕ್ಕೆ ಕಟ್ಟುಬಿದ್ದಿರುವ ಶಾಸಕ ಶಂಕರಲಿಂಗೇಗೌಡರ ಮಗನಿಗೆ ಮೈಸೂರು ಮುಡಾ ಅಧ್ಯಕ್ಷತೆ ನೀಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಬಂಡಾಯಗಾರರ ಬಣದ ಬುಡಕ್ಕೇ ಕೊಡಲಿಯೇಟು ಹಾಕುವ ಯತ್ನಗಳು ನಡೆದಿವೆ.
ಅಕ್ಟೋಬರ್ 11ರಂದು ಅಧಿವೇಶನ... ಈ ಮಧ್ಯೆ, ಅಕ್ಟೋಬರ್ 11ರಂದೇ ವಿಧಾನಸಭೆ ಅಧಿವೇಶನ ಕರೆದು ಬಹುಮತ ಸಾಬೀತಿಗೆ ಸಿದ್ಧವಿರುವುದಾಗಿ ತಾವು ರಾಜ್ಯಪಾಲರಿಗೆ ಮಾಹಿತಿ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ಷಮೆ ಕೇಳಿ, ಇಲ್ಲದಿದ್ದರೆ.... ಬಂಡಾಯವೆದ್ದಿರುವ ಶಾಸಕರು ರಾಜ್ಯದ ಆರು ಕೋಟಿ ಜನತೆಯ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧೆಗೆ ಅನರ್ಹಗೊಳಿಸುವ ರೀತಿಯಲ್ಲಿ ಪಕ್ಷವು ಕ್ರಮಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ರೆಸಾರ್ಟ್ ರಾಜಕೀಯ... ಆಕಡೆಯಿಂದ, ಬಿಜೆಪಿಯ ಆಪರೇಶನ್ ಕಮಲ ಸಾಧ್ಯತೆ ವರದಿಯಿಂದ ಭೀತಿಗೊಂಡಿರುವ ಕಾಂಗ್ರೆಸ್ ಪಕ್ಷವು, ಪುಣೆಯ ಆಂಬಿವ್ಯಾಲಿ ರೆಸಾರ್ಟ್‌ಗೆ ತನ್ನ ಶಾಸಕರನ್ನು ಇಂದೇ ರವಾನಿಸಲು ಯೋಚಿಸಿತ್ತಾದರೂ, ಹೈಕಮಾಂಡ್ ಸೂಚನೆ ಮೇರೆಗೆ ಈ ಪ್ರಯತ್ನವನ್ನು ಗುರುವಾರಕ್ಕೆ ಮುಂದೂಡಿದೆ.
ಇನ್ನೊಂದು ಕಡೆಯಿಂದ ಚೆನ್ನೈಗೆ ತೆರಳಿರುವ ಬಿಜೆಪಿ ಮತ್ತು ಪಕ್ಷೇತರ ಬಂಡಾಯ ಶಾಸಕರು, ಅಲ್ಲಿಂದ ಯಾವ ಕಡೆಗೆ ಹೋಗುವುದೆಂದು ಗೊಂದಲದಲ್ಲಿ ಸಿಲುಕಿದ್ದು, ಅವರಲ್ಲೇ ಒಂದು ಬಣವು ಆನಂದ ಅಸ್ನೋಟಿಕರ್ ಮತ್ತು ನರೇಂದ್ರ ಸ್ವಾಮಿ ನೇತೃತ್ವದಲ್ಲಿ ಕೇರಳದ ಕೊಚ್ಚಿಗೆ ತೆರಳಿದ್ದು, ಗುರುವಾರ ಅಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.