ಜೆಡಿಎಸ್ ಜತೆ ಅನೈತಿಕ ಸಂಬಂಧ ಮಾಡ್ಬೇಡಿ: ಕಾಂಗ್ರೆಸ್‌ಗೆ ಸಿಎಂ
ಬೆಂಗಳೂರು, ಗುರುವಾರ, 7 ಅಕ್ಟೋಬರ್ 2010( 09:24 IST )
ಜೆಡಿಎಸ್ ಜತೆ ಅನೈತಿಕ ಸಂಬಂಧ ಮಾಡಬೇಡಿ, ಹಿಂದೊಮ್ಮೆ ನಾನು ಅವರ ಸಹವಾಸ ಮಾಡಿ ಕೈ ಸುಟ್ಟುಕೊಂಡಿದ್ದೇನೆ. ನೀವು ಕೂಡ ಈ ಮೊದಲು ಕಹಿ ಅನುಭವ ಉಂಡಿದ್ದೀರಿ. ಹಾಗಾಗಿ ಮತ್ತೆ ಕೈಸುಟ್ಟುಕೊಳ್ಳೋಕೆ ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಮುಖಂಡರಿಗೆ ಬುಧವಾರ ಮನವಿ ಮಾಡಿಕೊಂಡಿದ್ದಾರೆ.
ಹಿಂದೆ ನಾನು ಅವರ ಜತೆ ಸೇರಿ ತಪ್ಪು ಮಾಡಿದ್ದೇನೆ. ಅದಕ್ಕಾಗಿ ಜನತೆ ಕ್ಷಮೆ ಕೇಳಿದ್ದೇನೆ ಎಂದು ಅವರು ಹೇಳಿದರು. ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಿಗೆ ಅಲ್ಪ-ಸ್ವಲ್ಪ ಗೌರವವಿದೆ. ಆದ್ದರಿಂದ ಅವರಿಗೆ ಈ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದರು.
ಜೆಡಿಎಸ್ ಜತೆ ಕಾಂಗ್ರೆಸ್‌ನವರು ಕೈಜೋಡಿಸಿದರೆ ಜನ ಸಹಿಸೋಲ್ಲ. ಇದನ್ನು ಪಕ್ಷದ ರಾಷ್ಟ್ರೀಯ ನಾಯಕರು ಅರಿತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಜೆಡಿಎಸ್ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಏರುವ ಯೋಗ್ಯತೆ ಇಲ್ಲ. ಹಾಗಾಗಿ ಅವರು ಹಿಂಬಾಗಿಲ ಮೂಲಕ ಪ್ರವೇಶ ಮಾಡಿ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಆರಂಭದಿಂದಲೂ ಜೆಡಿಎಸ್ ಕುತಂತ್ರ ನಡೆಸುತ್ತಲೇ ಬಂದಿತ್ತು. ಆದರೆ ಪ್ರತಿಬಾರಿಯೂ ಅವರ ಕನಸು ನನಸಾಗದೆ ಹೋಗಿತ್ತು. ಈ ಬಾರಿಯೂ ಕೂಡ ಜೆಡಿಎಸ್ ತಂತ್ರ ಫಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.