ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಕಾಲ್‌ಸೆಂಟರ್ ಉದ್ಯೋಗಿ ಪ್ರತಿಭಾ ಅವರ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಶಿವಕುಮಾರ್‌ನನ್ನು ದೋಷಿ ಎಂದು ಬುಧವಾರ ನ್ಯಾಯಾಲಯ ಘೋಷಿಸಿದೆ.
ನಗರದ 11ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಗುದಲಿ, ಶಿವಕುಮಾರ್‌ನನ್ನು ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಹೇಳಿದರು.
ಬೆಳಿಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಶಿವಕುಮಾರ್ ಪ್ರಕರಣದ ಅಪರಾಧಿ ಎಂದು ನ್ಯಾಯಾಧೀಶರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಏನನ್ನೂ ಮಾಡಿಲ್ಲ, ವಿವಾಹಿತನಾಗಿರುವ ನನ್ನ ಮೇಲೆ ಕುಟುಂಬದ ಜವಾಬ್ದಾರಿ ಇದ್ದು, ಕಡಿಮೆ ಪ್ರಮಾಣದ ಶಿಕ್ಷೆ ನೀಡಿ ಎಂದು ಮನವಿ ಮಾಡಿದ.
ಆನಂತರ ಸರಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಕೆ.ಪಾಟೀಲ್ ಅವರು, ಇದೊಂದು ಪ್ರಮುಖ ಪ್ರಕರಣವಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಮನವಿ ಮಾಡಿದರು. ಆರೋಪಿ ಪರ ವಕೀಲರ ವಾದ ಆಲಿಸಿದ ನಂತರ ನ್ಯಾಯಾಧೀಶರು ಶುಕ್ರವಾರ ತೀರ್ಪು ಪ್ರಕಟಿಸುವುದಾಗಿ ಹೇಳಿದರು.
ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಅವರನ್ನು ಕಚೇರಿಗೆಂದು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋದ ಕಾರು ಚಾಲಕ ಶಿವಕುಮಾರ್ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದ. ಡಿಸೆಂಬರ್ 13, 2005ರಲ್ಲಿ ನಡೆದ ಈ ಪ್ರಕರಣ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.