ದಕ್ಷಿಣ ಭಾರತದ ಆಡಳಿತಾರೂಢ ಮೊದಲ ಬಿಜೆಪಿ ಸರಕಾರ ಅಲ್ಪಮತಕ್ಕೆ ಇಳಿದು ಇಕ್ಕಟ್ಟಿಗೆ ಸಿಲುಕಿರುವ ಬೆಳವಣಿಗೆಯಲ್ಲಿ ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸುವ ಕೆಲಸವೂ ಮುಂದುವರಿದಿದ್ದು, ಸಚಿವರಾದ ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಕೇರಳಕ್ಕೆ ತೆರಳುವ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಸುದ್ದಿಗಾರರು ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಪ್ರಶ್ನಿಸಿದಾಗ, ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಮಾರಕವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿರುವುದಾಗಿ ಈ ಸಂದರ್ಭದಲ್ಲಿ ಆರೋಪಿಸಿದರು.
ಆಡಳಿತಾರೂಢ ಸರಕಾರವನ್ನು ಅಸ್ಥಿರಗೊಳಿಸಲು ಜೆಡಿಎಸ್ ಯತ್ನಿಸುತ್ತಿದೆ. ಅಲ್ಲದೆ ಅದಕ್ಕೆ ಪಕ್ಷದ ಕೆಲವರು ಸಾಥ್ ನೀಡಿರುವುದಾಗಿಯೂ ಅಸಮಾಧಾನ ವ್ಯಕ್ತಪಡಿಸಿದರು. ಏನೇ ಆದರೂ ಅಕ್ಟೋಬರ್ 11ರಂದು ಬೆಳಿಗ್ಗೆ 11 ಗಂಟೆಗೆ ತಾನು ಬಹುಮತ ಸಾಬೀತುಪಡಿಸುವುದಾಗಿ ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದೊಳಗೆ ಇದ್ದು ವಿಶ್ವಾಸದ್ರೋಹ ಕೆಲಸ ಮಾಡಿದ್ದ ಅಸ್ನೋಟಿಕರ್ ಮತ್ತು ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದಾಗಿ ಹೇಳಿದ ಅವರು ಇನ್ನೊಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರು. ಆ ಸಮಯದಲ್ಲಿ ಮತ್ತೆ ಐದಾರು ಮಂದಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.
ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್ ಶಾಸಕ ಬಾಲಚಂದ್ರ ಜಾರಕಿ ಹೊಳಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಾಳಯಕ್ಕೆ ಜಿಗಿದು ಸಚಿವ ಪಟ್ಟ ಗಿಟ್ಟಿಸಿಕೊಂಡಿದ್ದರು. ಅದೇ ರೀತಿ ಕಾರವಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಆನಂದ್ ಅಸ್ನೋಟಿಕರ್ ಬಿಜೆಪಿಗೆ ಸೇರ್ಪಡೆಗೊಂಡು ಮೀನುಗಾರಿಕಾ ಸಚಿವರಾಗಿದ್ದರು. ಇದೀಗ ಆಪರೇಶನ್ ಕಮಲದಿಂದ ಬಿಜೆಪಿಗೆ ಬಂದ ಇಬ್ಬರೂ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ. ಒಟ್ಟಿನಲ್ಲಿ ಬಂಡಾಯದ ಕಹಳೆ ಮೊಳಗಿಸಿದ ಶಾಸಕರಿಗೆ, ಸಚಿವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ.
ರಾಜ್ಯಪಾಲರಿಂದ ವಜಾ ಅಂಗೀಕಾರ: ಆನಂದ್ ಅಸ್ನೋಟಿಕರ್ ಮತ್ತು ಬಾಲಚಂದ್ರ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಶಿಫಾರಸ್ ಅನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂಗೀಕರಿಸಿದ್ದಾರೆ.
ರೇಣುಕಾಚಾರ್ಯ ವಜಾ ಯಾಕಿಲ್ಲ?: ಏತನ್ಮಧ್ಯೆ ಬಂಡಾಯ ಶಾಸಕರ ಮುಖಂಡತ್ವ ವಹಿಸಿಕೊಂಡಿರುವುದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ. ಮುಖ್ಯಮಂತ್ರಿಗಳು ಆಪರೇಶನ್ ಕಮಲದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಆಸ್ನೋಟಿಕರ್ ಮತ್ತು ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ. ಹಾಗಾದರೆ ರೇಣುಕಾಚಾರ್ಯ ಅವರನ್ನು ಮತ್ತೆ ಮುದ್ದು ಮಾಡುತ್ತಿರುವುದು ಯಾಕೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ತಾನು ಮುಖ್ಯಮಂತ್ರಿಗಳ ಮಾನಸ ಪುತ್ರ, ಸಿಎಂ ಕೈಬಿಡಲಾರೆ ಎಂದೆಲ್ಲಾ ಬೂಟಾಟಿಕೆ ಹೇಳಿಕೆ ಕೊಡುತ್ತಲೆ ಸರಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಮುಂದಾಗುತ್ತಿರುವವರಲ್ಲಿ ರೆಡ್ಡಿ ಪಾಳಯದ ನಂತರ ರೇಣುಕಾಚಾರ್ಯ ಪ್ರಮುಖರು ಹಾಗಿದ್ದ ಮೇಲೆ ರೇಣುಕಾಚಾರ್ಯ ಮೇಲೆ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಅನುಕಂಪ ಯಾಕೆಂದು ಪ್ರಶ್ನಿಸುತ್ತಿದ್ದಾರೆ.!